ADVERTISEMENT

ಕಮಲಾ ಹ್ಯಾರಿಸ್‌ 'ಜನ್ಮಮೂಲ' ಕೆದಕಿದ ಡೊನಾಲ್ಡ್‌ ಟ್ರಂಪ್

ಪಿಟಿಐ
Published 14 ಆಗಸ್ಟ್ 2020, 22:07 IST
Last Updated 14 ಆಗಸ್ಟ್ 2020, 22:07 IST
ಕಮಲಾ ಹ್ಯಾರಿಸ್‌, ಡೊನಾಲ್ಡ್‌ ಟ್ರಂಪ್‌
ಕಮಲಾ ಹ್ಯಾರಿಸ್‌, ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್: ‘ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕಾಗಿ ಡೆಮಾಕ್ರಾಟಿಕ್‌ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರು, ನನಗೆ ಕೇಳಿಬಂದ ಮಾಹಿತಿ ಪ್ರಕಾರ ಶ್ವೇತಭವನದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಅರ್ಹತೆಗಳನ್ನು ಹೊಂದಿಲ್ಲ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ. ಕಮಲಾ ಅವರ ಜನ್ಮಸ್ಥಳದ ಮೂಲವನ್ನು ಕೆದಕಿ ಈ ಮಾತುಗಳನ್ನಾಡಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ವಿರುದ್ಧವೂ ಅವರ ವಿರೋಧಿಗಳಿಂದ ಇಂಥದೇ ಆಂದೋಲನ ನಡೆದಿತ್ತು. ಆಗಲೂ ವಿರೋಧಿಗಳು ಒಬಾಮಾ ಅವರ ಜನ್ಮಸ್ಥಳದ ಮೂಲವನ್ನು ಪ್ರಶ್ನಿಸಿದ್ದರು.

ಜಮೈಕಾ ಮೂಲದ ತಂದೆ, ಭಾರತ ಮೂಲದ ತಾಯಿ ದಂಪತಿಗೆ ಜನಿಸಿರುವ, ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯಾಗಿ, ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡನ್ ಅವರು ಆಯ್ಕೆ ಮಾಡಿದ್ದರು. 55 ವಯಸ್ಸಿನ ಕಮಲಾ, ಕ್ಯಾಲಿಫೋರ್ನಿಯಾದಿಂದ ಸೆನೆಟರ್‌ ಆಗಿದ್ದಾರೆ.

ADVERTISEMENT

ನ್ಯೂಸ್ ವೀಕ್ ಪತ್ರಿಕೆಯಲ್ಲಿ ಡಾ.ಜಾನ್ ಈಸ್ಟ್‌ಮನ್ ಬರೆದಿರುವ ಲೇಖನದಲ್ಲಿ ಈ ಅಂಶವನ್ನು ಪ್ರಸ್ತಾಪಿಸಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಇದು ವ್ಯಾಪಕವಾಗಿ ಶೇರ್‌ ಆಗಿದೆ. ಇದನ್ನೇ ಉಲ್ಲೇಖಿಸಿ ಟ್ರಂಪ್ ಅವರು, ‘ಪ್ರತಿಭಾನ್ವಿತ ವಕೀಲರೊಬ್ಬರ ಲೇಖನದ ಮೂಲಕ ನನಗೆ ಈಗಷ್ಟೇ ಈ ವಿಷಯ ತಿಳಿಯಿತು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈಸ್ಟ್‌ಮನ್‌, 2010ರಲ್ಲಿ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್‌ ಸ್ಥಾನಕ್ಕೆ ರಿಪಬ್ಲಿಕನ್‌ ಪಕ್ಷದ ಹುರಿಯಾಳಾಗಿದ್ದರು.

ಟ್ರಂಪ್ ಈ ಬಗ್ಗೆ ತಮ್ಮ ನಿಲುವನ್ನು ತಿಳಿಸಲಿಲ್ಲ. ಆದರೆ, ಜನ್ಮಸ್ಥಳದ ಮೂಲ ಕುರಿತಂತೆಕಮಲಾ ಅವರು ಶ್ವೇತಭವನದಲ್ಲಿ ಕೆಲಸ ಮಾಡಲು ಅರ್ಹರಲ್ಲ ಎಂಬಂತೆ ಕೆಲ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದರು.

‘ಅವರಿಗೆ (ಕಮಲಾ) ಚುನಾವಣೆಗೆ ಸ್ಪರ್ಧಿಸಲು ಅಗತ್ಯ ಅರ್ಹತೆಗಳಿಲ್ಲ ಎಂಬ ವಿಷಯ ಈಗಷ್ಟೇ ಕೇಳಿದ್ದೇನೆ. ಈ ವಿಷಯ ಬರೆದಿದ್ದ ವಕೀಲರು ಅತ್ಯಂತ ಯೋಗ್ಯ ಮತ್ತು ಪ್ರತಿಭಾನ್ವಿತ. ಬರೆದಿದ್ದು ಸರಿಯೇ ಎಂಬ ಬಗ್ಗೆ ನನಗೆ ತಿಳಿದಿಲ್ಲ’ ಎಂದು ಟ್ರಂಪ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಆಯ್ಕೆಯಾದರೆ ಬಿಡೆನ್ ನಂತರದ ಸ್ಥಾನದಲ್ಲಿ ಕಮಲಾ ಹ್ಯಾರಿಸ್ ಇರಲಿದ್ದಾರೆ. ಅಮೆರಿಕದ ಸಂವಿಧಾನದ ಅನುಸಾರ, ಅಧ್ಯಕ್ಷರಾಗುವವರು ಅಮೆರಿಕದಲ್ಲಿ ಜನಿಸಿರಬೇಕು.

ಉಪಾಧ್ಯಕ್ಷ ಸ್ಥಾನ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರು ಪ್ರಥಮ ಕಪ್ಪು ವರ್ಣೀಯ ಹಾಗೂ ಭಾರತ- ಅಮೆರಿಕನ್, ಜಮೈಕಾ- ಅಮೆರಿಕನ್ ಮಹಿಳೆಯಾಗಲಿದ್ದಾರೆ.

‘ಬಿಡೆನ್ ಆಯ್ಕೆಯಾದರೆ ಅಮೆರಿಕದ ವರ್ಚಸ್ಸು ಕುಗ್ಗಲಿದೆ: ಟ್ರಂಪ್
‘ಜೋ ಬಿಡೆನ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರೆ ದೇಶದ ವರ್ಚಸ್ಸು ಕುಗ್ಗಲಿದ್ದು, ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಗುರಿಯಾಗಲಿದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಬಿಡೆನ್ ಅವರು ಪ್ರಸ್ತಾಪಿಸಿರುವ ನೀತಿ, ಚಿಂತನೆಗಳಿಂದ ದೇಶಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಟ್ರಂಪ್ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಜೋ ಬಿಡೆನ್ ಅವರು ಅಧ್ಯಕ್ಷರಾದರೆ ಜಗತ್ತು ನಗಲಿದೆ. ಇದರ ಪೂರ್ಣ ಲಾಭ ಪಡೆಯಲಿದೆ. ನಮ್ಮ ದೇಶ ಕುಸಿಯಲಿದೆ’ ಎಂದು ಅವರು ಟ್ವೀಟ್‌ನಲ್ಲಿ ಎಚ್ಚರಿಸಿದ್ದಾರೆ. ಇದರೊಂದಿಗೆ ಅವರು ಫಾಕ್ಸ್ ನ್ಯೂಸ್ ದೃಶ್ಯವನ್ನೂ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.