ADVERTISEMENT

ಡೆನ್ಮಾರ್ಕ್‌ ಜತೆ ವಿಭಿನ್ನ ಸಂಬಂಧ: ಜೈಶಂಕರ್‌

ಪಿಟಿಐ
Published 5 ಸೆಪ್ಟೆಂಬರ್ 2021, 8:10 IST
Last Updated 5 ಸೆಪ್ಟೆಂಬರ್ 2021, 8:10 IST
ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ಡೆನ್ಮಾರ್ಕ್‌ನ ವಿದೇಶಾಂಗ ಸಚಿವ ಜೆಪ್ಪೆ ಕೋಫೋಡ್‌ ಅವರು ಕೋಪನ್‌ಹೇಗನ್‌ನಲ್ಲಿ ಚರ್ಚಿಸಿದರು    ಎಎಫ್‌ಪಿ ಚಿತ್ರ
ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ಡೆನ್ಮಾರ್ಕ್‌ನ ವಿದೇಶಾಂಗ ಸಚಿವ ಜೆಪ್ಪೆ ಕೋಫೋಡ್‌ ಅವರು ಕೋಪನ್‌ಹೇಗನ್‌ನಲ್ಲಿ ಚರ್ಚಿಸಿದರು    ಎಎಫ್‌ಪಿ ಚಿತ್ರ   

ಕೋಪನ್‌ಹೇಗನ್: ‘ಡೆನ್ಮಾರ್ಕ್‌ ಜತೆ ಭಾರತ ವಿಭಿನ್ನ ರೀತಿಯ ಸಹಭಾಗಿತ್ವ ಹೊಂದಿದೆ’ ಎಂದು ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

ಐರೋಪ್ಯ ರಾಷ್ಟ್ರಗಳಾದ ಸ್ಲೊವೆನಿಯಾ, ಕ್ರೋವೆಷಿಯಾ ಮತ್ತು ಡೆನ್ಮಾರ್ಕ್‌ ಪ್ರವಾಸ ಕೈಗೊಂಡಿರುವ ಅವರು, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ಈ ರಾಷ್ಟ್ರಗಳ ನಾಯಕರ ಜತೆ ಸಮಾಲೋಚನೆ ನಡೆಸಿದರು.

ಡೆನ್ಮಾರ್ಕ್‌ ವಿದೇಶಾಂಗ ಸಚಿವ ಜೆಪ್ಪೆ ಕೋಫೋಡ್‌ ಅವರ ಜತೆ ನಡೆದ ಉಭಯ ದೇಶಗಳ ಜಂಟಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದ ಜೈಶಂಕರ್‌ ಅವರು, ‘ಅಭಿವೃದ್ಧಿ ವಿಷಯದಲ್ಲಿ ಡೆನ್ಮಾರ್ಕ್‌ ಉತ್ತಮ ಪದ್ಧತಿಗಳನ್ನು ಹೊಂದಿದೆ. ಇದರಿಂದ, ಭಾರತದಂತಹ ದೇಶಗಳಿಗೂ ಅನುಕೂಲವಾಗಲಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಉಭಯ ದೇಶಗಳು ಜಂಟಿ ಆಯೋಗ ರಚಿಸಿದ್ದು, ಮುಂದಿನ ಐದು ವರ್ಷಗಳಿಗೆ ಹೊಸದಾಗಿ ಕ್ರಿಯಾ ಯೋಜನೆ ರೂಪಿಸಲಾಯಿತು. ಕೋವಿಡ್‌ ನಡುವೆಯೂ ಇದುವರೆಗಿನ ಜಂಟಿ ಕ್ರಿಯಾ ಯೋಜನೆಯು ಅನುಷ್ಠಾನಗೊಂಡಿರುವ ಬಗ್ಗೆ ಪರಾಮರ್ಶಿಸಲಾಯಿತು. ಜಂಟಿ ಆಯೋಗದಲ್ಲಿ ಇದುವರೆಗೆ 10 ಕಾರ್ಯನಿರ್ವಹಣೆಯ ತಂಡಗಳಿದ್ದವು. ಈಗ ಆರೋಗ್ಯಕ್ಕೆ ಸಂಬಂಧಿಸಿದಂತೆ ಇನ್ನೊಂದು ತಂಡವನ್ನು ಸೇರಿಸಲಾಗಿದೆ. ಕೋವಿಡ್‌ ಅನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

‘ಡೆನ್ಮಾರ್ಕ್‌ನ ಪ್ರಮುಖ ಐವರು ಉದ್ಯಮಿಗಳನ್ನು ಭೇಟಿಯಾಗಿ ಬಂಡವಾಳ ಹೂಡಿಕೆ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಭಾರತದಲ್ಲಿ 200 ಡ್ಯಾನಿಷ್‌ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಡೆನ್ಮಾರ್ಕ್‌ನಲ್ಲೂ ಭಾರತದ ಹಲವು ಕಂಪನಿಗಳಿವೆ. ದ್ವಿಪಕ್ಷೀಯ ಸಹಕಾರ ಮೂಲಕ ಹೂಡಿಕೆಯನ್ನು ಹೆಚ್ಚಿಸುವ ಕುರಿತು ಚರ್ಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಡೆನ್ಮಾರ್ಕ್‌ಗೆ ಜೈಶಂಕರ್‌ ಅವರು ಮೊದಲ ಬಾರಿ ಭೇಟಿ ನೀಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿ ಭಾರತದ ವಿದೇಶಾಂಗ ಸಚಿವರೊಬ್ಬರು ಭೇಟಿ ನೀಡಿರುವುದು ಸಹ ಇದೇ ಮೊದಲ ಬಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.