ADVERTISEMENT

ಪಾಕ್‌ಗೆ ಎಫ್‌ 16 ವಿಮಾನ: ಅಮೆರಿಕದ ನೀತಿಗೆ ಜೈಶಂಕರ್‌ ಬೇಸರ

‘ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಯಾರನ್ನೂ ಮೂರ್ಖರನ್ನಾಗಿಸಲಾಗದು’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 14:23 IST
Last Updated 26 ಸೆಪ್ಟೆಂಬರ್ 2022, 14:23 IST
ಅಮೆರಿಕದ ವಾಷಿಂಗ್ಟನ್‌ನಲ್ಲಿ ಸೋಮವಾರ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು – ಪಿಟಿಐ ಚಿತ್ರ
ಅಮೆರಿಕದ ವಾಷಿಂಗ್ಟನ್‌ನಲ್ಲಿ ಸೋಮವಾರ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು – ಪಿಟಿಐ ಚಿತ್ರ   

ವಾಷಿಂಗ್ಟನ್‌:‘ಭಯೋತ್ಪಾದನೆಯ ನಿಗ್ರಹದ ಕಾರಣ ನೀಡಿ, ನೀವು ಪಾಕಿಸ್ತಾನಕ್ಕೆ ಎಫ್‌ 16 ಯುದ್ಧ ವಿಮಾನಗಳನ್ನು ಕೊಡುತ್ತಿದ್ದೀರಿ. ಈ ಮೂಲಕ ನೀವು ಯಾರನ್ನು ಮೂರ್ಖರನ್ನಾಗಿಸಲು ಹೊರಟಿದ್ದೀರಿ’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಅಮೆರಿಕ‌ದ ಇಬ್ಬಗೆಯ ನೀತಿ ವಿರುದ್ಧ ಚಾಟಿ ಬೀಸಿದ್ದಾರೆ.

ವಾಷಿಂಗ್ಟನ್‌ನಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಅವರು ಭಾರತೀಯ ಅಮೆರಿಕನ್ನರೊಂದಿಗೆ ಸೋಮವಾರ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಎಫ್ -16ರಂತಹ ಯುದ್ಧ ವಿಮಾನಗಳ ಸಾಮರ್ಥ್ಯ ಎಲ್ಲರಿಗೂ ತಿಳಿದಿದೆ. ಭಯೋತ್ಪಾದನೆ ನಿಗ್ರಹಕ್ಕಾಗಿ ಇವುಗಳನ್ನು ಒದಗಿಸುತ್ತಿರುವುದಾಗಿ ನೀವು (ಅಮೆರಿಕ) ಹೇಳಬಹುದು. ಆದರೆ, ಅವುಗಳನ್ನು ಅವರು ಎಲ್ಲಿ ನಿಯೋಜಿಸಿದ್ದಾರೆ ಮತ್ತು ಯಾವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ನಿಮಗೆ ತಿಳಿದಿದೆಯಾ? ಇಂತಹ ವಿಷಯಗಳನ್ನು ಹೇಳಿ ನೀವು ಯಾರನ್ನೂ ಮೂರ್ಖರನ್ನಾಗಿಸಲಾಗದು’ ಎಂದು ಜೈಶಂಕರ್‌ ಸಭಿಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ADVERTISEMENT

ಪಾಕಿಸ್ತಾನಕ್ಕೆ ನೀಡುತ್ತಿರುವ ಸೇನಾ ನೆರವಿನ ಸಮರ್ಥನೆ ಮತ್ತು ಆ ರಾಷ್ಟ್ರದೊಂದಿಗಿನ ಬಾಂಧವ್ಯಗಳು ಅಮೆರಿಕದ ಹಿತಾಸಕ್ತಿಗಳನ್ನು ಎಂದಿಗೂ ರಕ್ಷಿಸಿಲ್ಲ ಎಂದು ಅವರು ಹೇಳಿದರು.

ಅಮೆರಿಕ ಮಾಧ್ಯಮಗಳಿಗೂ ತಪರಾಕಿ:

‘ಅಮೆರಿಕದ ಮಾಧ್ಯಮಗಳು ಭಾರತದ ಬಗ್ಗೆ ಪಕ್ಷಪಾತದಿಂದ ಕೂಡಿದ ವರದಿಗಳನ್ನು ಪ್ರಕಟಿಸುತ್ತಿವೆ’ ಎಂದು ಸಚಿವ ಎಸ್‌.ಜೈಶಂಕರ್ ಟೀಕಿಸಿದ್ದಾರೆ.

ಹೆಸರು ಉಲ್ಲೇಖಿಸದೇ ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಬಗ್ಗೆಯೂ ಅವರು ಪರೋಕ್ಷ ಆಕ್ಷೇಪ ವ್ಯಕ್ತಪಡಿಸಿ, ‘ಇಲ್ಲಿನ ಮಾಧ್ಯಮಗಳನ್ನು ಗಮನಿಸಿದೆ. ಈ ನಗರದಿಂದ ಪ್ರಕಟವಾಗುವ ಪತ್ರಿಕೆಯೊಂದು ಸೇರಿ ಇಲ್ಲಿನ ಮಾಧ್ಯಮಗಳು ಏನು ಪ್ರಕಟಿಸುತ್ತಿವೆ ಎಂಬುದು ನಿಮಗೆ ನಿಜವಾಗಿಯೂ ಗೊತ್ತಿದೆಯೇ’ ಎಂದು ಭಾರತೀಯ–ಅಮೆರಿಕನ್ನರನ್ನು ಪ್ರಶ್ನಿಸಿದರು.

ಜೆಫ್ ಬೆಜೋಸ್ ಮಾಲೀಕತ್ವದ ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯು ವಾಷಿಂಗ್ಟನ್‌ನಿಂದ ಪ್ರಕಟವಾಗುತ್ತಿದೆ.

ಭಾರತ ವಿರೋಧಿ ಶಕ್ತಿಗಳು ಇಲ್ಲಿ ಹೆಚ್ಚುತ್ತಿವೆಯಲ್ಲ ಎಂದು ಕೇಳಿದ ಪ್ರಶ್ನೆಗೆ, ‘ಇಲ್ಲಿನ ಮಾಧ್ಯಮಗಳ ವರದಿಗಳು ಪಕ್ಷಪಾತದಿಂದ ಕೂಡಿವೆ. ಭಾರತದಲ್ಲಿ ನಿಜವಾಗಿಯೂ ಪ್ರಯತ್ನಗಳಾಗುತ್ತಿವೆ. ಭಾರತವು ತನ್ನ ಹಾದಿಯಲ್ಲೇ ಸಾಗುತ್ತಿದೆ. ಆದರೆ, ತಾವೇ ಭಾರತದ ರಕ್ಷಕರು ಮತ್ತು ಭಾರತ ರೂಪಿಸುವವರು ಎಂದು ಭಾವಿಸಿರುವವರು ಅಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಹೀಗೆ ಹೇಳುವವರ ಬಣ್ಣವೂ ಬಯಲಾಗುತ್ತಿದೆ’ ಎಂದರು.

‘ರಷ್ಯಾ ರಕ್ಷಣಾ ಸಾಮಗ್ರಿ ಅವಲಂಬನೆ ಭಾರತದ ವೈಫಲ್ಯವಲ್ಲ’

ವಾಷಿಂಗ್ಟನ್‌ (ಪಿಟಿಐ): ‘ರಷ್ಯಾದ ರಕ್ಷಣಾ ಸಾಧನಗಳ ಮೇಲಿನ ಅವಲಂಬನೆ ಭಾರತದ ವೈಫಲ್ಯವಲ್ಲ. ಅಮೆರಿಕದ ಧೋರಣೆಯಿಂದಾಗಿಯೇ ನಾವು ರಷ್ಯಾದ ಶಸ್ತಾಸ್ತ್ರ ಖರೀದಿಸಬೇಕಾಯಿತು ಮತ್ತು ಆ ರಾಷ್ಟ್ರದೊಂದಿಗೆ ಬಲವಾದ ರಕ್ಷಣಾ ಸಂಬಂಧ ಬೆಳೆಸಬೇಕಾಯಿತು’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಭಾನುವಾರ ಸಮರ್ಥಿಸಿಕೊಂಡಿದ್ದಾರೆ.

ಯುಎಸ್ ಇಂಡಿಯಾ ಫ್ರೆಂಡ್‌ಶಿಪ್‌ ಆ್ಯಂಡ್‌ಫೌಂಡೇಶನ್ ಫಾರ್ ಇಂಡಿಯಾ ಆ್ಯಂಡ್‌ ಇಂಡಿಯನ್ ದಿಸ್ಪೊರಾ ಸ್ಟಡೀಸ್ ಭಾರತೀಯ ಅಮೆರಿಕನ್ನರೊಂದಿಗೆಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘1965ರಿಂದ ಮುಂದಿನ 40ವರ್ಷಗಳವರೆಗೆ ಭಾರತಕ್ಕೆ ಅಮೆರಿಕದ ಒಂದೇ ಒಂದು ರಕ್ಷಣ ಸಾಧನಗಳು ಸಿಗಲಿಲ್ಲ. ಇದು ವಾಸ್ತವವಾಗಿ, ಭಾರತ ಮತ್ತು ಸೋವಿಯತ್ ರಷ್ಯಾ ಸಂಬಂಧವು ತುಂಬಾ ಪ್ರಬಲವಾದ ಅವಧಿಯಾಗಿದೆ. ಈಗ ಅಮೆರಿಕ ಮತ್ತು ಭಾರತದ ಸಂಬಂಧದಲ್ಲಿ ಬದಲಾವಣೆಯಾಗಿದ್ದು, ಅದೂ ಕಳೆದ 15 ವರ್ಷಗಳಿಂದ ಉಭಯ ರಾಷ್ಟ್ರಗಳ ನಡುವೆ ರಕ್ಷಣಾ ಸಹಕಾರ ಏರ್ಪಟ್ಟಿದೆಎಂದರು.

‘ಇಂದು ಉಭಯ ರಾಷ್ಟ್ರಗಳ ಸಂಬಂಧವು ವಿಭಿನ್ನ ಹೆಜ್ಜೆ ಇರಿಸಿದೆ. ಭದ್ರತಾ ಕ್ಷೇತ್ರವಷ್ಟೇ ಅಲ್ಲ, ಹಲವು ರಂಗಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಸಾಧ್ಯತೆಗಳಿವೆ. ಅಮೆರಿಕದ ಸಿ 17 ನಂತಹ ಅನೇಕ ವಿಮಾನಗಳನ್ನು ನಾವು ಹಾರಿಸುವ ಜತೆಗೆ ಅಮೆರಿಕದ ಸೇನೆಯೊಂದಿಗೆ ನಾವು ಸಮರಾಭ್ಯಾಸ ನಡೆಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.