ADVERTISEMENT

ಅಮೆರಿಕ: ಭಾರತ ಮೂಲದ ವೃತ್ತಿಪರರಿಂದ ಹಾಸಿಗೆ ಲಭ್ಯತೆ ತೋರಿಸುವ ನಕ್ಷೆ ಅಭಿವೃದ್ಧಿ

ಪಿಟಿಐ
Published 2 ಜೂನ್ 2021, 9:37 IST
Last Updated 2 ಜೂನ್ 2021, 9:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌: ಅಮೆರಿಕದಲ್ಲಿರುವ ಭಾರತೀಯ ವೈದ್ಯರು ಮತ್ತು ವೃತ್ತಿಪರರ ಗುಂಪೊಂದು ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯತೆ ಬಗ್ಗೆ ಮಾಹಿತಿ ನೀಡುವ ನಕ್ಷೆಯೊಂದನ್ನು (ಮ್ಯಾಪ್‌) ಸಿದ್ಧಪಡಿಸಿದೆ.

‘ಪ್ರಾಜೆಕ್ಟ್ ಮದದ್‌ ಕಾರ್ಯಕ್ರಮದಡಿಯಲ್ಲಿ ‘ಮದದ್‌ಮ್ಯಾಪ್ಸ್‌.ಕಾಮ್‌’ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮ್ಯಾಪ್‌ ಮೂಲಕ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ ಬಗ್ಗೆ ನೈಜ ಮಾಹಿತಿಯನ್ನು ಪಡೆಯಬಹುದಾಗಿದೆ’ ಎಂದು ವಾಷಿಂಗ್ಟನ್‌ ಮೂಲದ ಮದದ್‌ಮ್ಯಾಪ್ಸ್‌’ನ ಮುಖ್ಯ ವಿನ್ಯಾಸಕಾರ ಡಾ.ರಾಜೇಶ್‌ ಅನುಮೊಲು ಅವರು ತಿಳಿಸಿದರು.

‘ಭಾರತದಲ್ಲಿ ಕೋವಿಡ್‌ ಪ್ರಕರಣಗಳು ಏರುತ್ತಿವೆ. ಈ ಸಂಕಷ್ಟದ ಸಂದರ್ಭದಲ್ಲಿ ನಾಗರಿಕರು ಪ್ರತಿಯೊಂದು ಆಸ್ಪತ್ರೆಗಳಿಗೆ ಕರೆ ಮಾಡಿ, ಹಾಸಿಗೆ ಲಭ್ಯತೆ ಬಗ್ಗೆ ವಿಚಾರಣೆ ಮಾಡಬೇಕಾಗಿದೆ. ಹಲವು ಬಾರಿ ರೋಗಿ, ಆಸ್ಪತ್ರೆಗೆ ತಲುಪುವ ಮುನ್ನವೇ ಹಾಸಿಗೆಗಳು ಭರ್ತಿಯಾಗಿರುತ್ತವೆ’ ಎಂದು ಪ್ರಾಜೆಕ್ಟ್‌ ಮದದ್‌ ‍ಪ್ರಕಟಣೆಯಲ್ಲಿ ಹೇಳಿದೆ.

ADVERTISEMENT

‘ಕೋವಿಡ್‌ನ ಈ ಸಂದರ್ಭದಲ್ಲಿ ಹಾಸಿಗೆ ಲಭ್ಯತೆ ಬಗ್ಗೆ ನೈಜ ಸಮಯದ ಮಾಹಿತಿಯನ್ನು ನೀಡುವ ಭಾರತದ ಮೊದಲ ಮ್ಯಾಪ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಮದದ್‌ಮ್ಯಾಪ್ಸ್‌ ಮುಂದಿನ ದಿನಗಳಲ್ಲೂ ಸಹಾಯಕ್ಕೆ ಬರಲಿದೆ’ ಎಂದು ಪ್ರಾಜೆಕ್ಟ್‌ ಮದದ್‌ನ ಮುಖ್ಯಸ್ಥ ರಾಜ ಕಾರ್ತಿಕೇಯ ಅವರು ತಿಳಿಸಿದರು.

‘ಆಸ್ಪತ್ರೆಯ ಹೆಸರು, ವಿಳಾಸ, ಐಸಿಯು ಹಾಸಿಗೆ, ವೆಂಟಿಲೇಟರ್‌ ಲಭ್ಯತೆ, ಆಮ್ಲಜನಕ ಪೂರೈಕೆ, ಆಸ್ಪತ್ರೆಯ ದೂರವಾಣಿ ಸಂಖ್ಯೆ, ಆಸ್ಪತ್ರೆಗೆ ಹೋಗುವ ಮಾರ್ಗಗಳನ್ನು ಈ ಮ್ಯಾಪ್‌ ತೋರಿಸುತ್ತದೆ’ ಎಂದರು.

‘ಭಾರತ ಸರ್ಕಾರ ಮತ್ತು ಇತರೆ ಹೂಡಿಕೆದಾರರೊಂದಿಗೆ ಈ ಮ್ಯಾಪ್‌ ಅನ್ನು ಸ್ವಾಧೀನ ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದೇವೆ. ಈ ಮ್ಯಾಪ್‌ ಅನ್ನು ಕೋವಿನ್‌ ಅಥವಾ ಆರೋಗ್ಯಸೇತು ಆ್ಯಪ್‌ನಲ್ಲಿ ಸೇರ್ಪಡೆ ಮಾಡಿದರೆ, ದೇಶದ ಹಲವು ಜನರನ್ನು ತಲುಪಬಹುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.