
ಲಂಡನ್: ಇಸ್ರೇಲ್ ಜೊತೆ ಸೇರಿ ಇರಾನ್ ಮೇಲೆ ನಡೆಸುತ್ತಿರುವ ದಾಳಿ ಕುರಿತಂತೆ ಅಪಸ್ವರ ಎತ್ತಿದ್ದ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಟೀಕಿಸಿದ್ದಾರೆ.
ಇಲ್ಲಿನ ‘ದಿ ಸನ್’ ಪತ್ರಿಕೆಗೆ ಶ್ವೇತಭವನದಿಂದ ದೂರವಾಣಿ ಮೂಲಕ ಸಂದರ್ಶನ ನೀಡಿರುವ ಟ್ರಂಪ್, ‘ಇರಾನ್ ಮೇಲೆ ನಡೆಸುತ್ತಿರುವ ದಾಳಿಗಳ ವಿಚಾರದಲ್ಲಿ ಫ್ರಾನ್ಸ್, ಜರ್ಮನಿ ಸೇರಿ ಬ್ರಿಟನ್‌ನ ನೆರೆ ದೇಶಗಳು ನೀಡಿರುವ ಪ್ರತಿಕ್ರಿಯೆ ಶ್ಲಾಘನೀಯ’ ಎಂದು ಹೇಳಿದ್ದಾರೆ.
‘ಅಮೆರಿಕ ಮತ್ತು ಬ್ರಿಟನ್ ನಡುವಿನ ಬಾಂಧವ್ಯ ಈ ಹಿಂದೆ ಬಹಳ ಉತ್ತಮವಾಗಿತ್ತು. ಕಿಯರ್ ಸ್ಟಾರ್ಮರ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ಉಂಟಾಗಿದೆ. ಇರಾನ್ ಮೇಲಿನ ದಾಳಿ ವಿಚಾರದಲ್ಲಿ ಸ್ಟಾರ್ಮರ್ ನಮ್ಮ ಸಹಾಯಕ್ಕೆ ಬರಲಿಲ್ಲ’ ಎಂದಿದ್ದಾರೆ.
‘ಇರಾನ್ ಮೇಲೆ ವಾಯು ದಾಳಿಗಳನ್ನು ನಡೆಸುವ ಮೂಲಕ, ಅಲ್ಲಿನ ಸರ್ಕಾರವನ್ನು ಕಿತ್ತೊಗೆಯುವ ಜಂಟಿ ಕಾರ್ಯಾಚರಣೆಗೆ ಬ್ರಿಟನ್ ಕೈಜೋಡಿಸುವುದಿಲ್ಲ. ಆಡಳಿತ ಬದಲಿಸುವ ಇಂತಹ ತಂತ್ರಗಳಲ್ಲಿ ಬ್ರಿಟನ್‌ಗೆ ನಂಬಿಕೆ ಇಲ್ಲ’ ಎಂದು ಸಂಸತ್‌ನಲ್ಲಿ ಸ್ಟಾರ್ಮರ್ ಸೋಮವಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.