
ವಾಷಿಂಗ್ಟನ್: ಕಾರು ಚಲಾಯಿಸುತ್ತಿದ್ದ ಮಹಿಳೆಯನ್ನು ಗುಂಡಿಕ್ಕಿ ಕೊಂದ ವಲಸೆ ಮತ್ತು ಕಸ್ಟಮ್ಸ್ ಜಾರಿ ಅಧಿಕಾರಿ (ಐಸಿಇ) ಕ್ರಮವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅವಳ ಸಾವಿಗೆ ಅವಳೇ ಕಾರಣ’ ಎಂದು ಹೇಳಿದ್ದಾರೆ.
ಮಿನ್ನಿಯಾಪೊಲಿಸ್‌ನಲ್ಲಿ ಬುಧವಾರ ಈ ಘಟನೆ ನಡೆದಿದೆ. ಕಾರು ಚಲಾಯಿಸುತ್ತಿದ್ದ 37 ವರ್ಷದ ರೆನೀ ನಿಕೋಲ್ ಗುಡ್ ಎಂಬ ಮಹಿಳೆಯನ್ನು ಗುರಿಯಾಗಿಸಿ ಐಸಿಇ ಅಧಿಕಾರಿಯೊಬ್ಬ ಎರಡು ಬಾರಿ ಗುಂಡು ಹಾರಿಸಿದ್ದಾರೆ. ನಿಯಂತ್ರಣ ಕಳೆದುಕೊಂಡ ಕಾರು ಪಕ್ಕದಲ್ಲಿದ್ದ ಇತರ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಈ ಬಗ್ಗೆ ‘ದಿ ನ್ಯೂಯಾರ್ಕ್ ಟೈಮ್ಸ್’ಗೆ ಪ್ರತಿಕ್ರಿಯಿಸಿರುವ ಟ್ರಂಪ್, ‘ಅಧಿಕಾರಿ ಜೊತೆ ಆಕೆ ತುಂಬಾ ಭಯಾನಕವಾಗಿ ವರ್ತಿಸಿದ್ದಾಳೆ. ಅವರ ಮೇಲೆ ಕಾರು ಹರಿಸಲೂ ಯತ್ನಿಸಿದ್ದಳು’ ಎಂದು ಹೇಳಿದ್ದಾರೆ.
ನಂತರ ಘಟನೆಯ ವಿಡಿಯೊವನ್ನು ವೀಕ್ಷಿಸಿದ ಟ್ರಂಪ್, ತಮ್ಮ ಮಾತಿನ ಧಾಟಿಯನ್ನು ಕೊಂಚ ಬದಲಾಯಿಸಿದ್ದಾರೆ. ಇದೊಂದು ಹಿಂಸಾತ್ಮಕ ಘಟನೆ ಎಂದು ಹೇಳಿದ್ದಾರೆ.
‘ಇದು ತುಂಬಾ ಭಯಾನಕವಾಗಿದೆ. ಇದನ್ನು ನೋಡಲು ನನಗೆ ಸಾಧ್ಯವಿಲ್ಲ. ಇಂತಹ ಘಟನೆಗಳು ನಡೆಯುವುದು ನನಗೆ ಇಷ್ಟವಿಲ್ಲ’ ಎಂದಿದ್ದಾರೆ.
ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಕೂಡ ಐಸಿಇ ಅಧಿಕಾರಿಯ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಆತ್ಮರಕ್ಷಣೆಗಾಗಿ ಹೀಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
‘ವಿಚಲಿತ ಎಡಪಂಥೀಯ ಮಹಿಳೆ ಅಧಿಕಾರಿಯ ಮೇಲೆಯೇ ಕಾರು ಹರಿಸಲು ಯತ್ನಿಸಿದ್ದಳು. ಕಾರಿನ ವೇಗ ಹೆಚ್ಚಿಸುವಾಗ ಅಧಿಕಾರಿಗೆ ಡಿಕ್ಕಿ ಹೊಡೆದಿರುವುದು ವಿಡಿಯೊದ ಇತರ ಕೋನಗಳಿಂದ ಸ್ಪಷ್ಟವಾಗುತ್ತದೆ’ ಎಂದು ಹೇಳಿದ್ದಾರೆ.
ವರದಿಯಲ್ಲಿ ವ್ಯತ್ಯಾಸ:
ಮಾರಕ ಗುಂಡಿನ ದಾಳಿಗೆ ಸಂಬಂಧಪಟ್ಟಂತೆ ಹೋಮ್‌ಲ್ಯಾಂಡ್ ಭದ್ರತಾ ಇಲಾಖೆ ಮತ್ತು ಮಿನ್ನಿಯಾಪೊಲಿಸ್ ನಗರ ಪಾಲಿಕೆ ವ್ಯತಿರಿಕ್ತ ವರದಿ ನೀಡಿವೆ.
‘ದಿನವಿಡೀ ಅಧಿಕಾರಿಯನ್ನು ಹಿಂಬಾಲಿಸುತ್ತಿದ್ದ ಮಹಿಳೆ, ಅವರ ಮೇಲೆ ಕಾರು ಹರಿಸಲು ಯತ್ನಿಸಿದ್ದಳು’ ಎಂದು ಹೋಮ್‌ಲ್ಯಾಂಡ್ ಭದ್ರತಾ ಇಲಾಖೆಯ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಹೇಳಿದ್ದಾರೆ.
ಆದರೆ, ಮಿನ್ನಿಯಾಪೊಲಿಸ್ ನಗರ ಪಾಲಿಕೆ, ‘ಸಂಚಾರಕ್ಕೆ ಮಹಿಳೆ ಅಡ್ಡಿಪಡಿಸಿದ್ದು, ಈ ವೇಳೆ ಅಲ್ಲಿಗೆ ಬಂದ ಐಸಿಇ ಅಧಿಕಾರಿ ಆಕೆಯ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ’ ಎಂದು ವರದಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.