ಡೊನಾಲ್ಡ್ ಟ್ರಂಪ್
ಸ್ಟಾವಂಗರ್/ನಾರ್ವೆ: ‘ಪ್ರಪಂಚದ ಏಳು ಯುದ್ಧಗಳನ್ನು ಕೊನೆಗೊಳಿಸಿದ್ದಕ್ಕಾಗಿ ತಮಗೇ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು’ ಎಂದು ಪುನರುಚ್ಛರಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶುಕ್ರವಾರ ಪ್ರಕಟವಾಗುವ ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಹಾತೊರೆಯುತ್ತಿದ್ದಾರೆ.
ಇತ್ತೀಚೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಇದೇ ವಿಷಯ ಪ್ರಸ್ತಾಪಿಸಿದ್ದ ಟ್ರಂಪ್, ‘ಎಲ್ಲರೂ ನನಗೇ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕೆಂದು ಬಯಸುತ್ತಿದ್ದಾರೆ’ ಎಂದು ಹೇಳಿದ್ದರು.
ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಸ್ವಯಂ ನಾಮನಿರ್ದೇಶನ ಮಾಡುವಂತಿಲ್ಲ. ಈ ಬಾರಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪಾಕಿಸ್ತಾನ ಸರ್ಕಾರ ಟ್ರಂಪ್ ಹೆಸರನ್ನು ನಾಮನಿರ್ದೇಶನ ಮಾಡಿವೆ. ಹಾಗೆ ನೋಡಿದರೆ, 2018ರಿಂದ ಹಲವು ಬಾರಿ ಟ್ರಂಪ್ ಹೆಸರನ್ನು ನೊಬೆಲ್ ಪ್ರಶಸ್ತಿಗಾಗಿ ಅಮೆರಿಕದಿಂದ ಮತ್ತು ಹೊರ ದೇಶಗಳಿಂದ ನಾಮನಿರ್ದೇಶನ ಮಾಡಲಾಗಿದೆ. ಆದರೆ, ಈ ಬಾರಿಯೂ ಟ್ರಂಪ್ ಅವರಿಗೆ ಪ್ರಶಸ್ತಿ ಸಿಗುವ ಸಾಧ್ಯತೆಗಳು ತುಂಬಾ ಕಡಿಮೆ ಎನ್ನುತ್ತಾರೆ ನೊಬೆಲ್ ಪ್ರಶಸ್ತಿ ವಿಶ್ಲೇಷಕರು.
ಇತ್ತೀಚಿನ ವರ್ಷಗಳಲ್ಲಿ ಟ್ರಂಪ್ ನಡೆಸಿರುವ ಕೆಲವು ಗಮನಾರ್ಹ ವಿದೇಶಾಂಗ ನೀತಿ ಮಧ್ಯಸ್ಥಿಕೆಗಳನ್ನೇ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ಪ್ರಮುಖ ಅಂಶವಾಗಿ ಪ್ರಸ್ತಾಪಿಸಲಾಗಿದೆ. ಆದರೆ, ಇವೆಲ್ಲವೂ ವೈಯಕ್ತಿಕ ಮಟ್ಟದ ಸಾಧನೆಗಳು. ನೊಬೆಲ್ ಪ್ರಶಸ್ತಿ ನೀಡುವ ರಾಯಲ್ ಸ್ವೀಡಿಶ್ ಅಕಾಡೆಮಿಯು ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಪುರಸ್ಕರಿಸುವಾಗ ಪ್ರಮುಖವಾಗಿ ವ್ಯಕ್ತಿ ಅಥವಾ ಸಂಸ್ಥೆಗಳ ಪ್ರಯತ್ನದಿಂದ ‘ಶಾಂತಿಯು ಎಷ್ಟು ದೀರ್ಘಾವಧಿವರೆಗೆ ನೆಲೆಸಿದೆ ಮತ್ತು ಅಂತರರಾಷ್ಟ್ರೀಯ ಭ್ರಾತೃತ್ವಕ್ಕೆ ಇದರ ಕೊಡುಗೆ ಏನು ಎನ್ನುವ ಅಂಶವನ್ನೇ ಮುಖ್ಯವಾಗಿ ಪರಿಶೀಲಿಸುತ್ತದೆ’ ಎನ್ನುವುದು ವಿಶ್ಲೇಷಕರ ವಾದ.
‘ತೆರೆಮರೆಯಲ್ಲಿದ್ದುಕೊಂಡು ಶಾಂತಿಗಾಗಿ ಸದ್ದಿಲ್ಲದೆ ಶ್ರಮಿಸುವ ವ್ಯಕ್ತಿ ಮತ್ತು ಸಂಸ್ಥೆಗಳನ್ನೇ ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುತ್ತದೆ. ಈ ಸಾಲಿನಲ್ಲಿ ನಿಲ್ಲುವ ಅಪಾರ ಸಂಖ್ಯೆಯ ‘ಉನ್ನತ ಮಟ್ಟದ ನಾಮನಿರ್ದೇಶನ’ಗಳ ನಡುವೆ, ಟ್ರಂಪ್ ಹೆಸರನ್ನು ನಾರ್ವೆ ಸಂಸತ್ತು ನೇಮಿಸಿರುವ ಐವರು ಸದಸ್ಯರನ್ನು ಒಳಗೊಂಡಿರುವ ನೊಬೆಲ್ ಸಮಿತಿಯು ಪರಿಗಣಿಸುವ ಸಾಧ್ಯತೆ ಕ್ಷೀಣ ಎನ್ನುತ್ತಾರೆ ತಜ್ಞರು.
2009ರಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪ್ರಶಸ್ತಿ ನೀಡಿದ್ದಕ್ಕಾಗಿ ನೊಬೆಲ್ ಸಮಿತಿಯು ತೀವ್ರ ಟೀಕೆ ಎದುರಿಸಿತ್ತು ಎನ್ನುವುದನ್ನೂ ತಜ್ಞರು ಬೊಟ್ಟು ಮಾಡಿ ತೋರಿಸುತ್ತಾರೆ.
ಶಾಂತಿಗೆ ವಿರುದ್ಧದ ನಿಲವು
ಟ್ರಂಪ್ ಅನುಸರಿಸಿಕೊಂಡು ಬರುತ್ತಿರುವ ಐಎಂಎಫ್ ಡಬ್ಲ್ಯುಟಿಒ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳ ಬಗೆಗಿನ ತಿರಸ್ಕಾರ ಜಾಗತಿಕ ಹವಾಮಾನ ವೈಪರೀತ್ಯದ ಬಗೆಗಿನ ನಿರ್ಲಕ್ಷ್ಯ ಕೂಡ ನೊಬೆಲ್ ಶಾಂತಿ ಪ್ರಶಸ್ತಿಯ ಆಶಯಕ್ಕೇ ವಿರುದ್ಧವಾಗಿವೆ. ‘ಭಾರತ–ಪಾಕಿಸ್ತಾನ ಥಾಯ್ಲೆಂಡ್ – ಕಾಂಬೋಡಿಯಾ ರವಾಂಡ – ಕಾಂಗೊ ಗಣರಾಜ್ಯ ಸೇರಿ 7 ಯುದ್ಧಗಳನ್ನು ಕೊನೆಗೊಳಿಸಿದ್ದೇನೆ’ ಎನ್ನುವ ಟ್ರಂಪ್ ಇದರಲ್ಲಿ ಶೇ 60ರಷ್ಟು ಯುದ್ಧಗಳು ‘ವ್ಯಾಪಾರ’ದ ಕಾರಣಕ್ಕಾಗಿಯೇ ಕೊನೆಗೊಂಡವು ಎನ್ನುತ್ತಿದ್ದಾರೆ ಹಾಗಾದರೆ ಇದರಲ್ಲಿ ಶಾಂತಿಯ ಆಶಯ ಎಲ್ಲಿದೆ ಎನ್ನುತ್ತಾರೆ ವಿಶ್ಲೇಷಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.