
ನ್ಯೂಯಾರ್ಕ್/ವಾಷಿಂಗ್ಟನ್: ‘ರಷ್ಯಾದೊಂದಿಗೆ ವ್ಯವಹರಿಸುವ ಯಾವುದೇ ರಾಷ್ಟ್ರಕ್ಕೆ ಕಠಿಣ ನಿರ್ಬಂಧ ವಿಧಿಸಲಾಗುವುದು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಟ್ರಂಪ್ ಆಡಳಿತ ಮತ್ತು ರಿಪಬ್ಲಿಕನ್ ಸದಸ್ಯರು ರಷ್ಯಾವನ್ನು ಗುರಿಯಾಗಿಸಿಕೊಂಡು ಕಠಿಣ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದಾರೆ.
‘ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮೇಲೆ ಒತ್ತಡ ಹೇರುವ ಗುರಿ ಹೊಂದಿರುವ ಕ್ರಮಗಳನ್ನು ಕಾಂಗ್ರೆಸ್ ಅಂಗೀಕರಿಸುವ ಸಮಯ ಬಂದಿದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ಭಾನುವಾರ ಪ್ರತಿಕ್ರಿಯಿಸಿದ ಟ್ರಂಪ್, ‘ಅವರು ಹಾಗೆ ಮಾಡುತ್ತಿದ್ದಾರೆಂದು ನಾನು ಕೇಳಿದ್ದೇನೆ. ಅದು ನನಗೂ ಸರಿ ಎನಿಸಿದೆ’ ಎಂದು ಹೇಳಿದರು.
‘ಅವರು ಕಾನೂನನ್ನು ಅಂಗೀಕರಿಸಲಿದ್ದು, ರಿಪಬ್ಲಿಕನ್ನರು ಅದನ್ನು ಜಾರಿಗೆ ತರಲಿದ್ದಾರೆ. ರಷ್ಯಾದೊಂದಿಗೆ ವ್ಯವಹಾರ ಮಾಡುವ ಯಾವುದೇ ದೇಶದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲಿದ್ದಾರೆ. ಆ ಪಟ್ಟಿಗೆ ಇರಾನ್ ಅನ್ನೂ ಸೇರಿಸುವಂತೆ ಸೂಚಿಸಿದ್ದೇನೆ’ ಎಂದರು.
ಸೆನೆಟರ್ ಲಿಂಡ್ಸೆ ಗ್ರಹಾಂ ಮಂಡಿಸಿದ ಮಸೂದೆಯು ರಷ್ಯಾದಿಂದ ತೈಲದ ಎರಡನೇ ಹಂತದ ಖರೀದಿ ಮತ್ತು ಮರು ಮಾರಾಟದ ಮೇಲೆ ಶೇಕಡ 500ರಷ್ಟು ಸುಂಕ ವಿಧಿಸುವುದನ್ನು ಪ್ರಸ್ತಾಪಿಸಿದೆ. ಈ ಪ್ರಸ್ತಾವಕ್ಕೆ ಸೆನೆಟ್‌ನ ವಿದೇಶಾಂಗ ವ್ಯವಹಾರಗಳ ಸಮಿತಿಯಿಂದ ಸರ್ವಾನುಮತದ ಬೆಂಬಲ ದೊರೆತಿದೆ.
ಗ್ರಹಾಂ ಮತ್ತು ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಅವರು ಜಂಟಿಯಾಗಿ 2025ರ ರಷ್ಯಾ ನಿಷೇಧ ಕಾಯ್ದೆಯನ್ನು ಮಂಡಿಸಿದ್ದಾರೆ. ಉಕ್ರೇನ್ ವಿರುದ್ಧ ಪುಟಿನ್ ನಡೆಸುತ್ತಿರುವ ಯುದ್ಧಕ್ಕೆ ಅನುಕೂಲವಾಗುವಂತೆ ರಷ್ಯಾದೊಂದಿಗೆ ವಹಿವಾಟು ನಡೆಸುವ ರಾಷ್ಟ್ರಗಳ ಮೇಲೆ ದ್ವಿತೀಯ ಹಂತದ ಸುಂಕಗಳು ಮತ್ತು ನಿರ್ಬಂಧಗಳನ್ನು ವಿಧಿಸಲು ಈ ಮಸೂದೆ ಅವಕಾಶ ಕಲ್ಪಿಸಲಿದೆ.
ಟ್ರಂಪ್ ಆಡಳಿತವು ಭಾರತದ ಮೇಲೆ ಶೇ 50ರಷ್ಟು ಸುಂಕ ವಿಧಿಸಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚು. ಇದರಲ್ಲಿ ರಷ್ಯಾದಿಂದ ಇಂಧನ ಖರೀದಿಸುತ್ತಿರುವುದಕ್ಕೆ ವಿಧಿಸಿರುವ ಶೇ 25ರಷ್ಟು ಸುಂಕವೂ ಸೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.