ADVERTISEMENT

ಅಮೆರಿಕ ಕ್ಯಾಪಿಟಲ್‌ಗೆ ನುಗ್ಗಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರಿಂದ ಸಂಘರ್ಷ

ಪಿಟಿಐ
Published 7 ಜನವರಿ 2021, 3:46 IST
Last Updated 7 ಜನವರಿ 2021, 3:46 IST
ಅಮೆರಿಕ ಕ್ಯಾಪಿಟಲ್‌ಗೆ ನುಗಿ ಪೊಲೀಸರ ವಿರುದ್ಧ ಸಂಘರ್ಷಕ್ಕಿಳಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರು
ಅಮೆರಿಕ ಕ್ಯಾಪಿಟಲ್‌ಗೆ ನುಗಿ ಪೊಲೀಸರ ವಿರುದ್ಧ ಸಂಘರ್ಷಕ್ಕಿಳಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರು   

ವಾಷಿಂಗ್ಟನ್: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಅಮೆರಿಕ ಕ್ಯಾಪಿಟಲ್ (ಸಂಸತ್) ಮೇಲೆ ನುಗ್ಗಿ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದರು.

ಘಟನೆಯಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಪರಿಸ್ಥಿತಿ ನಿಯಂತ್ರಣಕ್ಕಾಗಿ ಕರ್ಫ್ಯೂ ಹೇರಲಾಗಿದೆ.

ಕಳೆದ ನವೆಂಬರ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಗೆಲುವನ್ನು ಟ್ರಂಪ್ ಬೆಂಬಲಿಗರು ವಿರೋಧಿಸುತ್ತಿದ್ದಾರೆ. ಈ ಮಧ್ಯೆ ಘಟನೆಯನ್ನು ಖಂಡಿಸಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್, ಇದು ಅಮೆರಿಕ ಇತಿಹಾಸದ ಅತ್ಯಂತ 'ಕರಾಳ ಕ್ಷಣ' ಎಂದು ಆಕ್ರೋಶ ತೋಡಿಕೊಂಡಿದ್ದಾರೆ.

ADVERTISEMENT

ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ಸಾಗುತ್ತಿರುವ ಮಧ್ಯೆ ಭದ್ರತೆಯನ್ನು ಉಲ್ಲಂಘಿಸಿ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿದ ನೂರಾರು ಪ್ರತಿಭಟನಾಕಾರರು ಧಾಂದಲೆ ನಡೆಸಿದರು.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಅಮೆರಿಕ ಕಾಂಗ್ರೆಸ್‌ನ ಅನೇಕ ಅಧಿಕಾರಿಗಳು ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸಿಎನ್‌ಎನ್ ‌ವರದಿ ಮಾಡಿದೆ.

ಬಳಿಕ ಘಟನೆಯ ತೀವ್ರತೆಯನ್ನು ಮನಗಂಡಿರುವ ಡೊನಾಲ್ಡ್ ಟ್ರಂಪ್, ತಮ್ಮ ಬೆಂಬಲಿಗರಲ್ಲಿ ಹಿಂಸಾಚಾರವನ್ನು ಕೈಬಿಟ್ಟು ಕಾನೂನಿಗೆ ಬದ್ಧರಾಗಿ ಮನೆಗೆ ಹಿಂತಿರುವಂತೆ ಮನವಿ ಮಾಡಿದರು.

ನಿಮಗೆ ನೋವುಂಟಾಗಿದೆ ಎಂಬುದು ನನಗೆ ತಿಳಿದಿದೆ. ಚುನಾವಣೆಯಲ್ಲಿ ನಮಗೆ ಅನ್ಯಾಯವಾಗಿದೆ. ಆದರೆ ನೀವೀಗ ಮನೆಗೆ ಹಿಂತಿರಬೇಕು. ನಾವೀಗ ಶಾಂತಿ ಪಾಲನೆ ಮಾಡಬೇಕು. ಕಾನೂನು ಸುವ್ಯವಸ್ಥೆ ಪಾಲಿಸಬೇಕು. ಯಾರಿಗೂ ನೋವುಂಟು ಮಾಡುವುದನ್ನು ಬಯಸುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಟ್ವಿಟರ್ ವಿಡಿಯೊದಲ್ಲಿ ತಿಳಿಸಿದರು.

'ಈ ರೀತಿಯ ಪರಿಸ್ಥಿತಿ ಎಂದಿಗೂ ಇರಲಿಲ್ಲ. ಅಂತಹ ಘಟನೆ ಸಂಭವಿಸಿದೆ. ಅವರು ನಮ್ಮಿಂದ ಕಸಿದುಕೊಂಡರು. ನನ್ನಿಂದ, ನಿಮ್ಮಿಂದ, ನಮ್ಮ ದೇಶದಿಂದ' ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದರು.

ಇದು ಮೋಸದ ಚುನಾವಣೆ. ಆದರೆ ಇವರ ಕೈಯಲ್ಲಿ ನಾವು ಆಟವಾಡಬಾರದು. ನಾವು ಶಾಂತಿ ಕಾಪಾಡಬೇಕು. ಆದ್ದರಿಂದ ಮನೆಗೆ ಹಿಂತುರುಗಿ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.