ವಾಷಿಂಗ್ಟನ್: ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿನ ವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಖುದ್ದಾಗಿ ಭೇಟಿಯಾಗಬಹುದು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಆದರೆ, ಸಭೆಯ ದಿನಾಂಕ ಮತ್ತು ಸ್ಥಳವನ್ನು ಇನ್ನು ನಿಗದಿಪಡಿಸಿಲ್ಲ ಎಂದು ಅವರು ಹೇಳಿದ್ದಾರೆ.
ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಬುಧವಾರ ಮಾಸ್ಕೋದಲ್ಲಿ ಪುಟಿನ್ ಅವರನ್ನು ಭೇಟಿಯಾದ ಕೆಲವೇ ಗಂಟೆಗಳ ನಂತರ ಉಭಯ ನಾಯಕರ ಸಂಭಾವ್ಯ ಭೇಟಿಯ ವಿಷಯ ಹೊರಬಿದ್ದಿದೆ.
ವಿಟ್ಕಾಫ್–ಪುಟಿನ್ ಭೇಟಿಯ ಕುರಿತು ಟ್ರುತ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದ ಟ್ರಂಪ್, ರಷ್ಯಾ ಅಧ್ಯಕ್ಷರ ಜೊತೆ ಸಕಾರಾತ್ಮಕ ಮಾತುಕತೆ ನಡೆದಿದೆ ಎಂದು ತಿಳಿಸಿದ್ದರು.
‘ಈ ಸಭೆಯ ಬಗ್ಗೆ ಯುರೋಪ್‌ನಲ್ಲಿರುವ ಅಮೆರಿಕದ ಮಿತ್ರರಾಷ್ಟ್ರಗಳಿಗೆ ಮಾಹಿತಿ ನೀಡಿದ್ದೇನೆ. ರಷ್ಯಾ-ಉಕ್ರೇನ್ ಯುದ್ಧವನ್ನು ಮುಂದಿನ ದಿನಗಳಲ್ಲಿ ಅಥವಾ ವಾರಗಳಲ್ಲಿ ಕೊನೆಗೊಳಿಸಲು ಅವರು ಕೆಲಸ ಮಾಡುತ್ತಾರೆ’ ಎಂದು ತಿಳಿಸಿದ್ದಾರೆ.
‘ಟ್ರಂಪ್ ಅವರನ್ನು ಭೇಟಿಯಾಗುವ ಬಯಕೆಯನ್ನು ರಷ್ಯಾ ಅಧ್ಯಕ್ಷರು ವ್ಯಕ್ತಪಡಿಸಿದ್ದಾರೆ. ಉಕ್ರೇನ್ ಅಧ್ಯಕ್ಷ ಝುಲೆನ್‌ಸ್ಕಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಅವರ ಜೊತೆ ಮಾತುಕತೆ ನಡೆಸಲು ಟ್ರಂಪ್ ಅವರು ಮುಕ್ತರಾಗಿದ್ದಾರೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
ಉಕ್ರೇನ್ ಜತೆಗೆ ಕದನ ವಿರಾಮ ಘೋಷಿಸುವಂತೆ ರಷ್ಯಾಕ್ಕೆ ಟ್ರಂಪ್ ನೀಡಿದ 50 ದಿನಗಳ ಗಡುವು ಶುಕ್ರವಾರ ಕೊನೆಗೊಳ್ಳಲಿದೆ.
ಏತನ್ಮಧ್ಯೆ, ಯುದ್ಧ ನಿಲ್ಲಿಸದಿದ್ದರೆ ಇನ್ನಷ್ಟು ಆರ್ಥಿಕ ನಿರ್ಬಂಧಗಳನ್ನು ಹೇರಲಾಗುವುದು, ರಷ್ಯಾದಿಂದ ತೈಲ ಖರೀದಿಸುತ್ತಿರುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂದು ಟ್ರಂಪ್ ಎಚ್ಚರಿಸಿದ್ದರು. ಈ ಎಲ್ಲಾ ಕಾರಣಗಳಿಂದ ಉಭಯ ನಾಯಕರ ಭೇಟಿ ಮಹತ್ವ ಪಡೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.