ADVERTISEMENT

ಗಣರಾಜ್ಯೋತ್ಸವ: ಭಾರತದ ಆಮಂತ್ರಣ ನಿರಾಕರಿಸಿದ ಟ್ರಂಪ್ 

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 6:56 IST
Last Updated 28 ಅಕ್ಟೋಬರ್ 2018, 6:56 IST
 ಮೋದಿ- ಟ್ರಂಪ್    ಸಂಗ್ರಹ ಚಿತ್ರ  (ಕೃಪೆ: ಎಪಿ)
ಮೋದಿ- ಟ್ರಂಪ್ ಸಂಗ್ರಹ ಚಿತ್ರ (ಕೃಪೆ: ಎಪಿ)   

ನವದೆಹಲಿ: 2019 ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭಾರತ ಆಮಂತ್ರಿಸಿದ್ದು, ಈ ಆಮಂತ್ರಣವನ್ನು ಟ್ರಂಪ್ ನಿರಾಕರಿಸಿದ್ದಾರೆ.

ಮೂಲಗಳ ಪ್ರಕಾರ ಅಮೆರಿಕದ ಅಧಿಕಾರಿಗಳು ಭಾರತದ ರಕ್ಷಣಾ ಸಲಹೆಗಾರ ಅಜಿತ್ ದೋವಲ್‍ಗೆ ಕಳುಹಿಸಿದ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ. ಅಮೆರಿಕದಲ್ಲಿನ ರಾಷ್ಟ್ರೀಯ ಕೆಲಸ ಕಾರ್ಯಗಳಲ್ಲಿ ಬ್ಯುಸಿ ಆಗಿರುವುದರಿಂದ ಟ್ರಂಪ್ ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಏಪ್ರಿಲ್ ತಿಂಗಳಲ್ಲಿ ಭಾರತ ಆಮಂತ್ರಣ ಕಳುಹಿಸಿತ್ತು.ಆ ಹೊತ್ತಲ್ಲಿಆಮಂತ್ರಣ ಸಿಕ್ಕಿದೆ ಎಂದು ಹೇಳಿದ ಅಮೆರಿಕ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ 2+2 ಮಾತುಕತೆಯ ನಂತರವೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿತ್ತು.

ADVERTISEMENT

ಅಮೆರಿಕದ ವಿರೋಧವನ್ನು ಕಡೆಗಣಿಸಿ ಭಾರತ ರಷ್ಯಾದೊಂದಿಗೆ ಎಸ್-400 ಕ್ಷಿಪಣಿ ಒಪ್ಪಂದ ಮತ್ತು ಇರಾನ್‍ನಿಂದ ತೈಲ ಆಮದು ಮಾಡಲು ತೀರ್ಮಾನಿಸಿತ್ತು. ರಷ್ಯಾದೊಂದಿಗೆ ಮಿಲಿಟರಿ ಒಪ್ಪಂದ ಮಾಡಿಕೊಳ್ಳುವ ಯಾವುದೇ ದೇಶವು ಪರೋಕ್ಷ ದಿಗ್ಬಂಧನ ಎದುರಿಸಬೇಕಾಗಬಹುದು ಎಂದು ಅಮೆರಿಕ ಬೆದರಿಕೆಯೊಡ್ಡಿತ್ತು.
ಅಮೆರಿಕದ ಹಿತಾಸಕ್ತಿಗಳಿಗೆ ಧಕ್ಕೆಯುಂಟು ಮಾಡುವ ಬೆಳವಣಿಗೆಗಳನ್ನು ನಿವಾರಿಸಿಕೊಳ್ಳಲು ಅಮೆರಿಕ ಬಳಿ ‘ಕಾಟ್ಸಾ’ (Countering America's Adversaries through Sanctions Act- CAATSA) ಅಸ್ತ್ರವಿದೆ. ರಷ್ಯದಿಂದ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಳ್ಳುವ ದೇಶಗಳ ವಿರುದ್ಧ ಅಮೆರಿಕ ಈ ಅಸ್ತ್ರ ಪ್ರಯೋಗಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಎಸ್‌–400 ಒಪ್ಪಂದ ಕುತೂಹಲ ಕೆರಳಿಸಿತ್ತು. ಅದೇ ವೇಳೆ ಇರಾನ್‍ನಿಂದ ತೈಲ ಆಮದು ಮಾಡುವ ತೀರ್ಮಾನದ ಬಗ್ಗೆಯೂ ಅಮೆರಿಕ ತಕರಾರು ಮಾಡಿತ್ತು.

ಟ್ರಂಪ್ ಅವರನ್ನು ಆಮಂತ್ರಿಸಲು ಭಾರತ ಹೆಚ್ಚು ಆಸಕ್ತಿ ವಹಿಸಿದ್ದು, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಲ್ಲದೇ ಇದ್ದರೆ ಫೆಬ್ರುವರಿ ತಿಂಗಳಲ್ಲಿ ಅಮೆರಿಕ ಅಧ್ಯಕ್ಷರಿಗೆ ಆತಿಥ್ಯ ನೀಡುವ ಬಗ್ಗೆ ಚಿಂತಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.