ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ರೀಮಂತ ವಲಸಿಗರಿಗಾಗಿ ‘ಗೋಲ್ಡ್ ಕಾರ್ಡ್’ಗಳನ್ನು ಪರಿಚಯಿಸುವ ಮೂಲಕ ಅಮೆರಿಕದ ಪೌರತ್ವ ಪಡೆಯುವುದನ್ನು ಸುಲಭಗೊಳಿಸಲು ಯೋಜಿಸುತ್ತಿದ್ದಾರೆ. ಈ ಕಾರ್ಡ್‌ಗಳನ್ನು ಶ್ರೀಮಂತ ವಲಸಿಗರು 5 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 43 ಕೋಟಿ 55 ಲಕ್ಷ) ಪಾವತಿಸಿ ಖರೀದಿಸಬಹುದಾಗಿದೆ ಎಂದು ವರದಿಯಾಗಿದೆ.
‘ಅಮೆರಿಕದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರಿಗೆ, ಅಮೆರಿಕದ ಶಾಶ್ವತ ನಿವಾಸಿಗಳಾಗಲು ಅನುವು ಮಾಡಿಕೊಡುವ ಇಬಿ-5 ವೀಸಾ ಯೋಜನೆಯನ್ನು ಗೋಲ್ಡ್ ಕಾರ್ಡ್‌ನೊಂದಿಗೆ ಬದಲಾಯಿಸಲಾಗುವುದು’ ಎಂದು ಟ್ರಂಪ್ ತಿಳಿಸಿದ್ದಾರೆ.
ಈ ಗೋಲ್ಡ್ ಕಾರ್ಡ್‌ಗಳು ಈಗಾಗಲೇ ಅಸ್ತಿತ್ವದಲ್ಲಿರುವ ಗ್ರೀನ್ ಕಾರ್ಡ್ ನಿವಾಸಿಗಳು ಮತ್ತು ಹೊಸ ವಿದೇಶಿಯರಿಗೆ ಅಮೆರಿಕನ್ ಪೌರತ್ವದ ಮಾರ್ಗವನ್ನು ಮತ್ತಷ್ಟು ಸುಲಭಗೊಳಿಸಲಿದೆ. ಸುಮಾರು ಒಂದು ಮಿಲಿಯನ್ ಗೋಲ್ಡ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಉದ್ದೇಶವಿದ್ದು, ಈ ಉಪಕ್ರಮವು ರಾಷ್ಟ್ರೀಯ ಸಾಲವನ್ನು ತ್ವರಿತವಾಗಿ ತೀರಿಸಲು ಸಹಾಯ ಮಾಡಲಿದೆ ಎಂದು ಟ್ರಂಪ್ ವಿವರಿಸಿದ್ದಾರೆ.
ಇಬಿ-5 ಯೋಜನೆಯು ಅಮೆರಿಕನ್ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಭರವಸೆ ನೀಡುವ ವಿದೇಶಿಯರಿಗೆ, ಗ್ರೀನ್ ಕಾರ್ಡ್‌ಗಳನ್ನು ನೀಡುತ್ತದೆ. ನಾವು ಈಗ ಸುಮಾರು 5 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಗೋಲ್ಡ್ ಕಾರ್ಡ್‌ಗಳನ್ನು ಮಾರಾಟ ಮಾಡಲಿದ್ದೇವೆ. ಇದು ನಿಮಗೆ ಗ್ರೀನ್ ಕಾರ್ಡ್ ಸವಲತ್ತುಗಳನ್ನು ನೀಡುವುದರ ಜೊತೆಗೆ, ಅಮೆರಿಕನ್ ಪೌರತ್ವ ಪಡೆಯುವ ಮಾರ್ಗವನ್ನು ಸುಲಭಗೊಳಿಸಲಿದೆ ಎಂದಿದ್ದಾರೆ.
ಅಕ್ರಮ ವಲಸಿಗರ ನೋಂದಣಿ
ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ ಪ್ರತಿ ವ್ಯಕ್ತಿಯ ಹೆಸರು ನೋಂದಾಯಿಸುವ ಕೆಲಸವನ್ನು ಟ್ರಂಪ್ ನೇತೃತ್ವದ ಆಡಳಿತವು ಆರಂಭಿಸಿದೆ. ಅಕ್ರಮವಾಗಿ ನೆಲಸಿರುವವರು ತಾವಾಗಿಯೇ ಹೆಸರು ನೋಂದಾಯಿಸಿಕೊಳ್ಳದೆ ಇದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ವಲಸೆ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮವಾಗಿ ನೆಲಸಿರುವ ಪ್ರತಿ ವ್ಯಕ್ತಿಯೂ ತನ್ನ ಬೆರಳಚ್ಚು ವಿಳಾಸವನ್ನು ಒದಗಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. 14 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿರುವ ಪ್ರತಿಯೊಬ್ಬರಿಗೂ ಇದು ಅನ್ವಯವಾಗುತ್ತದೆ. ‘ಹೊರಗಿನವರು ಹೆಸರು ನೋಂದಾಯಿಸಲು ವಿಫಲರಾದಲ್ಲಿ ದಂಡ ಅಥವಾ ಜೈಲು ಶಿಕ್ಷೆ ಅಥವಾ ಅವರೆಡೂ ಶಿಕ್ಷೆಗಳಿಗೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.