ADVERTISEMENT

ಚೀನಾ ಔಷಧ ಉದ್ಯಮದಿಂದ ಪಾಕಿಸ್ತಾನ ಕತ್ತೆಗಳಿಗೆ ಭಾರಿ ಬೇಡಿಕೆ; ಒಂದಕ್ಕೆ ₹2 ಲಕ್ಷ!

ಪಿಟಿಐ
Published 8 ಜೂನ್ 2025, 14:16 IST
Last Updated 8 ಜೂನ್ 2025, 14:16 IST
<div class="paragraphs"><p>ಕತ್ತೆ</p></div>

ಕತ್ತೆ

   

ಕರಾಚಿ: ಚೀನಾದಲ್ಲಿ ಕತ್ತೆ ಚರ್ಮ ಬಳಸುವ ಎಜಿಯಾವೊ (Ejiao) ಉದ್ಯಮ ಬೆಳೆಯುತ್ತಿರುವ ಹಿನ್ನೆಲೆ ಪಾಕಿಸ್ತಾನದಲ್ಲಿ ಕತ್ತೆ ಬೆಲೆ ಹೆಚ್ಚಳವಾಗಿದೆ. ಮಾರುಕಟ್ಟೆಯಲ್ಲಿ ಒಂದು ಕತ್ತೆ ಬೆಲೆ ₹2 ಲಕ್ಷಕ್ಕೆ ಏರಿದೆ ಎನ್ನುತ್ತಾರೆ ವರ್ತಕರು.

ಈ ಕುರಿತು ಮಾತನಾಡಿರುವ ಕರಾಚಿಯ ವ್ಯಕ್ತಿ ಅಬ್ದುಲ್‌ ರಶೀದ್‌, ‘ಆದಾಯಕ್ಕೆ ಮೂಲವಾಗಿದ್ದ ಕತ್ತೆ ಕಳೆದ ವಾರ ಅ‍ಪಘಾತದಲ್ಲಿ ಮರಣ ಹೊಂದಿದೆ. ವರ್ಷಗಳ ಹಿಂದೆ ಕತ್ತೆಯನ್ನು ಕೊಳ್ಳುವಾಗ ಒಂದಕ್ಕೆ ₹30 ಸಾವಿರ ಇತ್ತು, ಆದರೆ ಈಗ ₹2 ಲಕ್ಷಕ್ಕೆ ಏರಿದೆ. ಹೀಗಾಗಿ ಹೊಸ ಕತ್ತೆ ಕೊಳ್ಳುವುದೂ ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು.

ADVERTISEMENT

ಎಜಿಯಾವೊ ಎಂಬುದು ಚೀನಾದ ಸಾಂಪ್ರದಾಯಿಕ ಔಷಧದಲ್ಲಿ ಬಳಸುವ ಜೆಲಟಿನ್ ಆಗಿದ್ದು, ಇದನ್ನು ಕತ್ತೆ ಚರ್ಮವನ್ನು ಕುದಿಸಿ ತಯಾರಿಸಲಾಗುತ್ತದೆ. ಆಯಾಸ ತಡೆಯುವ, ರೋಗನಿರೋಧಕ ಶಕ್ತಿಯನ್ನು ಸುಧಾರಿಸುವ ಗುಣಲಕ್ಷಣಗಳು, ರಕ್ತಹೀನತೆ ತಡೆಗೆ ಜೈವಿಕ ಪ್ರಯೋಜನಗಳಿಗಾಗಿ ಇದನ್ನು ಚಿಕಿತ್ಸಾಲಯಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಎಂದು ಪಿಟಿಐ ವರದಿ ತಿಳಿಸಿದೆ.

‘ಕತ್ತೆ ಚರ್ಮದ ವ್ಯಾಪಾರ ಈಗ ಜಗತ್ತನ್ನೇ ವ್ಯಾಪಿಸಿದೆ. ಅದಕ್ಕೆ ಕಾರಣ, ಚೀನಾಕ್ಕೆ ಪೂರೈಕೆಯಾಗುತ್ತಿರುವ ಕತ್ತೆಗಳಿಗಿಂತ ಬೇಡಿಕೆ ಹೆಚ್ಚಿರುವುದು. ಕಡಿಮೆ ದರ ಎಂದರೂ ಆರೋಗ್ಯಯುತ ಕತ್ತೆಯ ಬೆಲೆ ₹1 ಲಕ್ಷ 55 ಸಾವಿರ ಇದೆ’ ಎನ್ನುತ್ತಾರೆ ಕರಾಚಿಯಲ್ಲಿ ಕತ್ತೆ ಮಾರಾಟಗಾರರ ಸಂಪರ್ಕ ಇರುವ ರಶೀದ್‌.

ಮಾಧ್ಯಮ ವರದಿಗಳ ಪ್ರಕಾರ ಕತ್ತೆ ಚರ್ಮವನ್ನು ಬಳಸಿ ತಯಾರಾಗುವ ಚೀನಾದ ಎಜಿಯಾವೊ  ಉತ್ಪನ್ನಗಳು ಕಳೆದ ಐದು ವರ್ಷಗಳಲ್ಲಿ ಶೇ 160ರಷ್ಟು ಏರಿಕೆಯಾಗಿದೆ. ಇದರರ್ಥ ಬೇಡಿಕೆಯನ್ನು ಪೂರೈಸಲು ಲಕ್ಷಾಂತರ ಕತ್ತೆ ಚರ್ಮಗಳು ಬೇಕಾಗುತ್ತವೆ.

ಪಾಕಿಸ್ತಾನದಲ್ಲಿ ಬಹುತೇಕ ಕೆಲಸಗಳಿಗೆ ಕತ್ತೆ ಅವಿಭಾಜ್ಯ ಅಂಗವಾಗಿದೆ. ಕೃಷಿ, ತ್ಯಾಜ್ಯ ವಿಲೇವಾರಿ, ಸಾರಿಗೆ ಸೇರಿದಂತೆ ಹಲವು ಕೆಲಸಗಳಿಗೆ ಜನರು ಕತ್ತೆಯನ್ನೇ ನೆಚ್ಚಿಕೊಂಡಿದ್ದಾರೆ. ಇನ್ನೂ ಹಲವರು ಕತ್ತೆ ಗಾಡಿಗಳ ಮೂಲಕ ಭಾರದ ವಸ್ತುಗಳನ್ನು ಸಾಗಣೆ ಮಾಡಿ ದಿನದ ದುಡಿಮೆ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.