
ನೆಮಿಸಿಯೊ ಒಸೆಗುರಾ
ಕೃಪೆ: ಎಕ್ಸ್
ಮೆಕ್ಸಿಕೊ ಸಿಟಿ: 'ಎಲ್ ಮೆಂಚೊ' ಎಂದೇ ಕುಖ್ಯಾತನಾಗಿದ್ದ, ಅಕ್ರಮ ಮಾದಕ ವಸ್ತು ಸಾಗಣೆದಾರ ನೆಮಿಸಿಯೊ ಒಸೆಗುರಾ, ಸೇನಾ ಕಾರ್ಯಾಚರಣೆ ವೇಳೆ ಹತ್ಯೆಯಾಗಿದ್ದಾನೆ ಎಂದು ಮೆಕ್ಸಿಕೊದ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕವು ಅತಿಕ್ರಮಣದ ಬೆದರಿಕೆ ಒಡ್ಡುತ್ತಿರುವುದರ ನಡುವೆ, ಮೆಕ್ಸಿಕೊ ಸರ್ಕಾರವು ಅಲ್ಲಿನ ಕಾರ್ಟೆಲ್‌ಗಳ ಮೇಲೆ ಒತ್ತಡ ಹೇರುತ್ತಿದೆ. ಅದರಂತೆ ನಡೆದ ಭದ್ರತಾ ಕಾರ್ಯಾಚರಣೆಯಲ್ಲಿ ಒಸೆಗುರಾ ಹತ್ಯೆಯಾಗಿದ್ದಾನೆ.
ಜಲಿಸ್ಕೊ ರಾಜ್ಯದಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಒಸೆಗುರಾ, ವಾಯು ಮಾರ್ಗದ ಮೂಲಕ ಮೆಕ್ಸಿಕೊಗೆ ಕರೆತರುವ ವೇಳೆ ಮೃತಪಟ್ಟಿದ್ದಾನೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇದಕ್ಕೆ ಪೂರಕ ಮಾಹಿತಿಯನ್ನು ಯುಎಸ್ ಅಧಿಕಾರಿಗಳು ಒದಗಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಒಸೆಗುರಾ ಹತ್ಯೆ ಕಾರ್ಯಾಚರಣೆಯು ಮೆಕ್ಸಿಕೊದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ಹಲವು ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಉದ್ರಿಕ್ತರು, ಹಲವು ಕಾರುಗಳು, ಗನ್‌ಮ್ಯಾನ್‌ಗಳಿಗೆ ಬೆಂಕಿ ಹಚ್ಚಿದ್ದಾರೆ.
ಒಸೆಗುರಾ ಹತ್ಯೆಯು ಅಮೆರಿಕ, ಮೆಕ್ಸಿಕೊ ಹಾಗೂ ಲ್ಯಾಟಿನ್ ಅಮೆರಿಕದ ಇತರ ಭಾಗಗಳಿಗೆ 'ಮಹತ್ವದ ಬೆಳವಣಿಗೆ' ಎಂದು ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಹೇಳಿದ್ದಾರೆ.
ಎಚ್ಚರದಿಂದಿರಿ: ಭಾರತೀಯ ರಾಯಭಾರಿ ಕಚೇರಿ ಸಂದೇಶ
ಮೆಕ್ಸಿಕೊದಲ್ಲಿ ನೆಲೆಸಿರುವ ತನ್ನ ನಾಗರಿಕರು ಅನಗತ್ಯವಾಗಿ ಹೊರಗೆ ಓಡಾಡದಂತೆ ಹಾಗೂ ಪ್ರೋಟೊಕಾಲ್‌ಗಳನ್ನು ಅನುಸರಿಸುವಂತೆ ಅಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕರೆ ನೀಡಿದೆ.
'ಭದ್ರತಾ ಕಾರ್ಯಾಚರಣೆಗಳು, ಹಿಂಚಾಚಾರದ ಹಿನ್ನೆಲೆಯಲ್ಲಿ ಜಲಿಸ್ಕೊ, ತಮೌಲಿಪಾಸ್, ಮೈಕೋವಕನ್, ಗೆರೆರೊ ಮತ್ತು ನ್ಯೂವೊ ಲಿಯಾನ್ ರಾಜ್ಯಗಳಲ್ಲಿ ಇರುವ ಭಾರತೀಯರು ಮುಂದಿನ ಸೂಚನೆವರೆಗೆ ಆಶ್ರಯ ತಾಣಗಳಲ್ಲೇ ಉಳಿಯಬೇಕು' ಎಂದು ಟ್ವೀಟ್ ಮಾಡಿದೆ.
'ಕಾನೂನು ಜಾರಿ ಸಂಬಂಧಿತ ಕಾರ್ಯಾಚರಣೆಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಓಡಾಡುವುದನ್ನು ತಪ್ಪಿಸಿ. ಸುತ್ತಮುತ್ತಲು ನಡೆಯುತ್ತಿರುವುದರ ಬಗ್ಗೆ ಎಚ್ಚರದಿಂದಿರಿ. ಹೊರಗೆ ಓಡಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಗಮನಿಸುತ್ತಿರಿ. ಸ್ಥಳೀಯ ಆಡಳಿತಗಳು ನೀಡುವ ನಿರ್ದೇಶನಗಳನ್ನು ಪಾಲಿಸಿ. ತುರ್ತು ಸಂದರ್ಭದಲ್ಲಿ 911ಗೆ ಕರೆ ಮಾಡಿ. ಅನಗತ್ಯವಾಗಿ ಗುಂಪು ಸೇರದಿರಿ. ಸಾಮಾಜಿಕ ಮಾಧ್ಯಮಗಳಲ್ಲಿ ಅಥವಾ ಮೊಬೈಲ್‌ನಲ್ಲಿ ಕರೆ/ಸಂದೇಶ ಹಂಚಿಕೊಳ್ಳುವ ಮೂಲಕ ನೀವಿರುವ ಸ್ಥಳ, ಸುರಕ್ಷತೆ ಕುರಿತು ಕುಟುಂಬದವರು, ಸ್ನೇಹಿತರೊಂದಿಗೆ ಮಾಹಿತಿ ಹಂಚಿಕೊಳ್ಳಿ' ಎಂದೂ ಸಲಹೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.