ಸಾಂದರ್ಭಿಕ ಚಿತ್ರ
ಮೆಕ್ಸಿಕೋ ಸಿಟಿ: ಪಾನಮತ್ತನಾಗಿದ್ದ 16 ವರ್ಷದ ಬಾಲಕನೊಬ್ಬ ತನ್ನ ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಅಮೆರಿಕದ ಮೆಕ್ಸಿಕೋದಲ್ಲಿ ನಡೆದಿದೆ.
ಮೆಕ್ಸಿಕೋದ ವೆಲೆನ್ಸಿಯಾ ಕೌಂಟಿ ವ್ಯಾಪ್ತಿಯಲ್ಲಿ ಕಳೆದ ಶನಿವಾರ ಬೆಳಿಗ್ಗೆ 3.30 ರ ಸುಮಾರು ಈ ಘಟನೆ ನಡೆದಿದೆ ಎಂದು ನ್ಯೂ ಮೆಕ್ಸಿಕೋ ಸ್ಟೇಟ್ ಪೊಲೀಸ್ ಅಧಿಕಾರಿಗಳು ತಿಳಿಸಿರುವುದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಾಲಕ ಡಿಗೊ ಲೇವಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಡಿಗೊ ತಂದೆ ಲಿಯೋನಾರ್ಡೊ (42) ತಾಯಿ ಅಡ್ರೀನಾ ಬೆನ್‌ಕೊಮೊ (35) ಸಹೋದರಿ ಅಡ್ರೀನಾ (18) ಸಹೋದರ ಅಲೆಗ್ಸಾಂಡರ್ (14) ಎಂದು ಗುರುತಿಸಲಾಗಿದೆ.
ಶನಿವಾರ ಬೆಳಿಗ್ಗೆ ಪೊಲೀಸರಿಗೆ ಕರೆ ಮಾಡಿದ ಡಿಗೊ ಲೇವಿ ತಾನು ತನ್ನ ತಂದೆ ತಾಯಿ ಸಹೋದರ ಹಾಗೂ ಸಹೋದರಿಯನ್ನು ಹ್ಯಾಂಡ್‌ಗನ್‌ನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದೇನೆ ಎಂದು ತಿಳಿಸಿದ್ದ. ಸ್ಥಳಕ್ಕೆ ದೌಡಾಯಿಸಿದಾಗ ಬಾಲಕ ಎರಡೂ ಕೈ ಮೇಲೆತ್ತಿ ಪೊಲೀಸರಿಗೆ ಶರಣಾಗಿದ್ದಾನೆ. ಬಂಧನ ವೇಳೆ ಆತ ವಿಪರೀತ ಕುಡಿದಿದ್ದ. ಹತ್ಯೆ ಮಾಡಲು ಕಾರಣ ಏನು ಎಂಬುದು ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಬಂಧಿತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಕುರಿತು ನ್ಯೂಸ್ 18 ಮಾಧ್ಯಮ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.