ADVERTISEMENT

ವಿಶ್ವದಾಖಲೆ | ಅವರ ವಯಸ್ಸು 215 ವರ್ಷ: ಈಕ್ವೆಡರ್‌ ದಂಪತಿಗೆ ಅತ್ಯಂತ ಹಿರಿಯರ ಪಟ್ಟ

ಏಜೆನ್ಸೀಸ್
Published 29 ಆಗಸ್ಟ್ 2020, 9:37 IST
Last Updated 29 ಆಗಸ್ಟ್ 2020, 9:37 IST
ಜೂಲಿ ಮೊರಾ ಮತ್ತು ವಾಲ್ಡ್ರಾಮಿನಾ ಕ್ವಿಂಟೆರೋಸ್ –ಟ್ವಿಟರ್‌ ಚಿತ್ರ
ಜೂಲಿ ಮೊರಾ ಮತ್ತು ವಾಲ್ಡ್ರಾಮಿನಾ ಕ್ವಿಂಟೆರೋಸ್ –ಟ್ವಿಟರ್‌ ಚಿತ್ರ   

ಕ್ವಿಟೊ(ಈಕ್ವೆಡರ್‌‌): ಇಲ್ಲಿನ ಜೂಲಿ ಮೊರಾ ಮತ್ತುವಾಲ್ಡ್ರಾಮಿನಾ ಕ್ವಿಂಟೆರೋಸ್ ಅವರು ಅತ್ಯಂತ ಹಿರಿಯ ದಂಪತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಇವರ ಹೆಸರನ್ನು ವಿಶ್ವದಾಖಲೆಯಲ್ಲಿ ಸೇರಿಸಲಾಗಿದೆ.

ಮನೆಯವರ ವಿರೋಧದ ನಡುವೆಯೂ 1941ರ ಫೆಬ್ರುವರಿ 7ರಂದು ಇವರು ವಿವಾಹವಾಗಿದ್ದರು.ಇಬ್ಬರು ನಿವೃತ್ತ ಶಿಕ್ಷಕರಾಗಿದ್ದು, ಈಕ್ವೆಡರ್‌ನ ರಾಜಧಾನಿ ಕ್ವಿಟೊ ನಿವಾಸಿಯಾಗಿದ್ದಾರೆ.

79 ವರ್ಷಗಳ ದಾಂಪತ್ಯ ಜೀವನ ನಡೆಸಿರುವ ಇವರನ್ನು ಆಗಸ್ಟ್‌ ಎರಡನೇ ವಾರದಲ್ಲಿ ‘ಅತ್ಯಂತ ಹಿರಿಯ ದಂಪತಿ’ ಎಂದು ಗಿನ್ನಿಸ್‌ ವಿಶ್ವ ದಾಖಲೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗಿದೆ.

ADVERTISEMENT

ವಿಶ್ವದಲ್ಲಿ ಇದಕ್ಕೂ ಹೆಚ್ಚು ವರ್ಷ ದಾಂಪತ್ಯ ಜೀವನದಲ್ಲಿ ತೊಡಗಿರುವ ದಂಪತಿಗಳು ಇದ್ದಾರೆ. ಆದರೆ ಈ ವಯಸ್ಸಿನ ವ್ಯಕ್ತಿಗಳಿಬ್ಬರು ಇಷ್ಟು ವರ್ಷಗಳ ಕಾಲ ಜೊತೆಗಿರುವುದು ಇದೇ ಮೊದಲು. ಅವರಿಬ್ಬರ ವಯಸ್ಸನ್ನು ಕೂಡಿಸಿದರೆ 215 ವರ್ಷಗಳಾಗುತ್ತದೆ ಎಂದು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಹೇಳಿದೆ.

‘ವಾಲ್ಡ್ರಾಮಿನಾ ಕ್ವಿಂಟೆರೋಸ್(110) ಮತ್ತು ಜೂಲಿ ಮೊರಾ (105) ಅವರು ಆರೋಗ್ಯವಾಗಿದ್ದಾರೆ. ಕೊರೊನಾದಿಂದಾಗಿ ಇದನ್ನು ಸಂಭ್ರಮಿಸಲು ದೊಡ್ಡ ಕೂಟವನ್ನು ಏರ್ಪಡಿಸಲು ಸಾಧ್ಯವಾಗುತ್ತಿಲ್ಲ’ ಎಂದು ದಂಪತಿಯ ಸಂಬಂಧಿಕರು ತಿಳಿಸಿದರು.

‘ನಮ್ಮ ತಂದೆ ಟಿ.ವಿ. ನೋಡುವುದನ್ನು ಮತ್ತು ಹಾಲು ಸೇವಿಸುವುದನ್ನು ಇಷ್ಟಪಡುತ್ತಾರೆ. ನಮ್ಮ ತಾಯಿ ಪ್ರತಿ ದಿನ ಬೆಳಿಗ್ಗೆ ತಪ್ಪದೇ ದಿನಪತ್ರಿಕೆ ಓದುತ್ತಾರೆ’ ಎಂದು ದಂಪತಿಯ ಪುತ್ರಿ ಸೆಸಿಲಿಯಾ ತಿಳಿಸಿದ್ದಾರೆ.

ಈ ಹಿರಿಯ ದಂಪತಿಗೆ ನಾಲ್ವರು ಮಕ್ಕಳು, 11 ಮೊಮ್ಮಕ್ಕಳು, 21 ಮರಿಮೊಮ್ಮಕ್ಕಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.