ADVERTISEMENT

ಐಫೆಲ್‌ ಟವರ್‌ಗೆ ಹಿಜಾಬ್‌: ಫ್ರಾನ್ಸ್‌ನಲ್ಲಿ ಮತ್ತೆ ಸದ್ದು ಮಾಡಿದ ಹಿಜಾಬ್ ವಿವಾದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2025, 11:54 IST
Last Updated 13 ಮಾರ್ಚ್ 2025, 11:54 IST
<div class="paragraphs"><p>ಐಫೆಲ್‌ ಟವರ್‌ಗೆ ಹಿಜಾಬ್‌</p></div>

ಐಫೆಲ್‌ ಟವರ್‌ಗೆ ಹಿಜಾಬ್‌

   

ಪ್ಯಾರಿಸ್‌: ಐತಿಹಾಸಿಕ ಐಫೆಲ್‌ ಟವರ್‌ಗೆ ಹಿಜಾಬ್‌ ಹೊದಿಸುವ ರೀತಿಯ ಜಾಹೀರಾತೊಂದು ಇದೀಗ ಫ್ರಾನ್ಸ್‌ನಲ್ಲಿ ಪರ ವಿರೋಧ ಚರ್ಚೆ ಹುಟ್ಟುಹಾಕಿದೆ.

ಡಚ್‌ ಮೂಲದ ಫ್ಯಾಷನ್‌ ಕಂಪನಿ ‘ಮೆರಾಚಿ’(Merrachi) ಈ ಜಾಹೀರಾತನ್ನು ಬಿಡುಗಡೆ ಮಾಡಿದ್ದು, ಇಸ್ಲಾಮಿಕ್ ಧಾರ್ಮಿಕ ಸಂಸ್ಕೃತಿಯ ಭಾಗವಾದ ಹಿಜಾಬ್ ಧರಿಸುವ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದೆ.

ADVERTISEMENT

ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿರುವ ಕಂಪನಿ, ‘ಐಫೆಲ್‌ ಟವರ್ ಹಿಜಾಬ್‌ ಧರಿಸಿರುವುದನ್ನು ನೋಡಿ. ಈಗಷ್ಟೇ ಫ್ಯಾಷನ್‌ ಸಮುದಾಯವನ್ನು ಸೇರಿರುವಂತೆ ಅವಳು ಕಾಣುತ್ತಿದ್ದಾಳೆ’ ಎಂದು ಬರೆದುಕೊಂಡಿದೆ.

ಈ ಜಾಹೀರಾತನ್ನು ವಿರೋಧಿಸಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ‘ನ್ಯಾಷನಲ್ ರ್‍ಯಾಲಿ’(ಬಲಪಂಥ) ಪಕ್ಷದ ಸಂಸದೆ ಲಿಸೆಟ್ ಪೊಲೆಟ್, ‘ಫ್ರಾನ್ಸ್‌ನ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಪರಂಪರೆಗೆ ಈ ಜಾಹೀರಾತು ಧಕ್ಕೆ ಉಂಟು ಮಾಡಿದೆ. ಇದು ಸ್ವೀಕಾರಾರ್ಹವಲ್ಲ’ ಎಂದು ಹೇಳಿದ್ದಾರೆ.

ಸಿಟಿಜನ್ಸ್ ಪೊಲಿಟಿಕಲ್ ಮೂವ್‌ಮೆಂಟ್‌ನ ಸಹ-ಸಂಸ್ಥಾಪಕ ಮತ್ತು ಅರ್ಥಶಾಸ್ತ್ರಜ್ಞ ಫಿಲಿಪ್ ಮುರರ್ ಅವರು ಫ್ರಾನ್ಸ್‌ನಲ್ಲಿರುವ ಮೆರಾಚಿಯ ಅಂಗಡಿಗಳನ್ನು ಮುಚ್ಚಬೇಕು ಮತ್ತು ಅದರ ವೆಬ್‌ಸೈಟ್ ಅನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಏತನ್ಮಧ್ಯೆ, ಜಾಹೀರಾತಿಗೆ ಬೆಂಬಲ ವ್ಯಕ್ತಪಡಿಸಿರುವ ಕೆಲವರು, ಮುಸ್ಲಿಂ ಮಹಿಳೆಯರ ಧಾರ್ಮಿಕ ಆಚರಣೆಗಳ ಕುರಿತ ಫ್ರಾನ್ಸ್ ನೀತಿಗಳ ಬಗ್ಗೆ ಈ ಜಾಹೀರಾತು ಚರ್ಚೆ ಹುಟ್ಟುಹಾಕಲಿದ್ದು, ಪ್ರಮುಖ ವಿಷಯದ ಬಗ್ಗೆ ಗಮನ ಸೆಳೆಯುತ್ತಿದೆ ಎಂದಿದ್ದಾರೆ.

ಇನ್ನು ಕೆಲವರು, ಇದೊಂದು ಸೃಜನಶೀಲ ಮತ್ತು ಉತ್ತಮ ಮಾರ್ಕೆಟಿಂಗ್ ತಂತ್ರವಾಗಿದೆ ಎಂದು ಜಾಹೀರಾತನ್ನು ಶ್ಲಾಘಿಸಿದ್ದಾರೆ.

2004ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಸೇರಿದಂತೆ ಎದ್ದು ಕಾಣುವ ಧಾರ್ಮಿಕ ಚಿಹ್ನೆಗಳನ್ನು ಧರಿಸುವುದನ್ನು ಫ್ರಾನ್ಸ್‌ ನಿಷೇಧಿಸಿತ್ತು. ಈ ಕಾನೂನು ಶೈಕ್ಷಣಿಕ ಸಂಸ್ಥೆಯಲ್ಲಿ ಜಾತ್ಯಾತೀತ ತತ್ವವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದು ಅದು ತಿಳಿಸಿತ್ತು.

2010ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡಗಳು, ಹೆಲ್ಮೆಟ್‌ಗಳು, ಬುರ್ಖಾ ಮತ್ತು ನಿಖಾಬ್‌ನಂತಹ ಪೂರ್ಣ ದೇಹ ಮುಚ್ಚುವ ಮತ್ತು ಮುಖ ಮುಚ್ಚುವ ಬಟ್ಟೆಗಳನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತಂದಿತ್ತು. ಈ ಕಾನೂನನ್ನು 2014ರಲ್ಲಿ ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯ ಎತ್ತಿಹಿಡಿದಿತ್ತು.

ಇತ್ತೀಚೆಗೆ ಫ್ರೆಂಚ್ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಅಬಯಾಗಳನ್ನು(ಮುಸ್ಲಿಂ ಮಹಿಳೆಯರು ಧರಿಸುವ ಸಡಿಲವಾದ ನಿಲುವಂಗಿಗಳು) ಧರಿಸುವುದನ್ನು ನಿಷೇಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.