ADVERTISEMENT

ಆನೆಗಳಿಗೂ ಬಂತು ಗರ್ಭನಿರೋಧಕ ಲಸಿಕೆ: ಥಾಯ್ಲೆಂಡ್‌ನಲ್ಲಿ ಬಳಕೆ

ಏಜೆನ್ಸೀಸ್
Published 31 ಜನವರಿ 2026, 11:49 IST
Last Updated 31 ಜನವರಿ 2026, 11:49 IST
<div class="paragraphs"><p>ಆನೆಗಳು (ಪ್ರಾತಿನಿಧಿಕ ಚಿತ್ರ)</p></div>

ಆನೆಗಳು (ಪ್ರಾತಿನಿಧಿಕ ಚಿತ್ರ)

   

ಬ್ಯಾಂಕಾಕ್: ಮಾನವರಲ್ಲಿ ಸಂತಾನೋತ್ಪತ್ತಿ ತಡೆಗೆ ಗರ್ಭನಿರೋಧಕ ಮಾತ್ರೆ ಅಥವಾ ಲಸಿಕೆಯನ್ನು ನೀಡುವುದನ್ನು ಕೇಳಿರುತ್ತೇವೆ. ಆದರೆ ಥಾಯ್ಲೆಂಡ್‌ನಲ್ಲಿ ಆನೆಗಳ ಸಂಖ್ಯೆಯನ್ನು ನಿಯಂತ್ರಿಸಲು ಗರ್ಭನಿರೋಧಕ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ.

ಥಾಯ್ಲೆಂಡ್‌ನಲ್ಲಿ ಹೆಚ್ಚುತ್ತಿರುವ ಆನೆಗಳ ಸಂತತಿಯಿಂದ ಮಾನವ ಮತ್ತು ಆನೆಗಳ ಸಂಘರ್ಷ ಪ್ರಕರಣಗಳೂ ಏರಿಕೆಯಾಗುತ್ತಿವೆ. ಹೀಗಾಗಿ ಅವುಗಳನ್ನು ನಿಯಂತ್ರಿಸುವ ಜರೂರಿದೆ. ಇದೇ ಕಾರಣಕ್ಕೆ ಸದ್ಯ ಮೂರು ಹೆಣ್ಣಾನೆಗಳಿಗೆ ಗರ್ಭನಿರೋಧಕ ಲಸಿಕೆಯನ್ನು ನೀಡಲಾಗಿದೆ ಎಂದು ಆಗ್ನೇಯ ಥೈಲ್ಯಾಂಡ್ ಪ್ರಾಂತ್ಯದ ವನ್ಯಜೀವಿ ಸಂರಕ್ಷಣಾ ಕಚೇರಿಯ ನಿರ್ದೇಶಕಿ ಸುಖೀ ಬೊನ್ಸಾಂಗ್ ಹೇಳಿದ್ದಾರೆ ಎಂದು ವರದಿಯಾಗಿದೆ. 

ADVERTISEMENT

ಬೇರೆ ಪ್ರದೇಶಗಳಲ್ಲಿ ಶೇ 3ರಷ್ಟು ಇರುವ ಆನೆಮರಿಗಳ ಜನನ ಪ್ರಮಾಣ ಆಗ್ನೇಯ ಥಾಯ್ಲೆಂಡ್‌ನ ಐದು ಪ್ರಾಂತ್ಯಗಳಲ್ಲಿ ಮಾತ್ರ ವಾರ್ಷಿಕವಾಗಿ ಶೇ 8ಕ್ಕೆ ಏರಿಕೆಯಾಗಿದೆ. ಪಶುವೈದ್ಯರು ಮತ್ತು ಅಧಿಕಾರಿಗಳು ಈ ವಾರ ಅರಿವಳಿಕೆ ಇಲ್ಲದೆ ಡಾರ್ಟ್ ಗನ್ ಬಳಸಿ ಲಸಿಕೆಗಳನ್ನು ನೀಡಿದ್ದಾರೆ ಎಂದು ಸಂರಕ್ಷಣಾ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಥಾಯ್ಲೆಂಡ್‌ನಲ್ಲಿ 2015ರಲ್ಲಿ 334 ಇದ್ದ ಕಾಡಾನೆಗಳ ಸಂಖ್ಯೆ 2025ರಲ್ಲಿ 800ಕ್ಕೆ ಏರಿಕೆಯಾಗಿತ್ತು. 2012ರಲ್ಲಿ ಮಾನವ–ಆನೆ ಸಂಘರ್ಷದಿಂದ 200ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು,100ಕ್ಕೂ ಹೆಚ್ಚು ಆನೆಗಳು ಸಾವಿಗೀಡಾಗಿದ್ದವು. 

ಇದರ ನಡುವೆ ಥಾಯ್ಲೆಂಡ್‌ನ ರಾಷ್ಟ್ರೀಯ ಪ್ರಾಣಿಯಾದ ಏಷ್ಯನ್ ಆನೆಗಳನ್ನು ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟವು ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಜೀವಿ ಎಂದು ವರ್ಗೀಕರಿಸಿದೆ ಎಂದೂ ಕಚೇರಿಯ ಹೇಳಿಕೆ ತಿಳಿಸಿದೆ.

‘ಎರಡು ವರ್ಷಗಳ ಹಿಂದೆ ಗರ್ಭನಿರೋಧಕ ಲಸಿಕೆಯನ್ನು ಏಳು ಆನೆಗಳ ಮೇಲೆ ಪ್ರಯೋಗಿಸಲಾಗಿತ್ತು. ಅದರ ಯಶಸ್ಸಿನ ಬಳಿಕ ಈಗ ಆನೆಗಳಿಗೆ ಲಸಿಕೆ ನೀಡಲಾಗಿದೆ. ಈ ವರ್ಷದ ಮಳೆಗಾಲದ ಒಳಗೆ ಇನ್ನೂ 15 ಡೋಸ್ ಲಸಿಕೆಯನ್ನು ಇನ್ನೊಂದು ಆನೆಗಳ ಹಿಂಡಿಗೆ ನೀಡಲಾಗುವುದು’ ಎಂದು ಸುಖೀ ತಿಳಿಸಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.