ADVERTISEMENT

ಟ್ವಿಟರ್ ವಿರುದ್ಧ ಪ್ರತಿ ದಾವೆ ಹೂಡಿದ ಇಲಾನ್ ಮಸ್ಕ್

ಐಎಎನ್ಎಸ್
Published 30 ಜುಲೈ 2022, 7:12 IST
Last Updated 30 ಜುಲೈ 2022, 7:12 IST
   

ಸ್ಯಾನ್ ಫ್ರಾನ್ಸಿಸ್ಕೊ: 44 ಬಿಲಿಯನ್ ಡಾಲರ್ ಖರೀದಿ ಒಪ್ಪಂದ ಕೈಬಿಟ್ಟ ಬಳಿಕ ಸಾಮಾಜಿಕ ಮಾಧ್ಯಮ ಸಂಸ್ಥೆ ಟ್ವಿಟರ್ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ಪ್ರತಿಯಾಗಿ ಟೆಕ್ ದೈತ್ಯ ಉದ್ಯಮಿ ಇಲಾನ್ಮಸ್ಕ್ ಅವರು ಸಹ ಪ್ರತಿ ದಾವೆ ಹೂಡಿದ್ದಾರೆ.

ಆದರೆ ಮೊಕದ್ದಮೆಯ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ. ನ್ಯಾಯಾಲಯದ ನಿಯಮಗಳ ಅಡಿಯಲ್ಲಿ ಭಾಗಶಃ ಪರಿಷ್ಕರಿಸಿದ ಬಳಿಕ ಶೀಘ್ರದಲ್ಲೇ ಮಾಹಿತಿ ಲಭ್ಯವಾಗಬಹುದು ಎಂದು ತಿಳಿದು ಬಂದಿದೆ.

ಇತ್ತೀಚಿನ, ಪ್ರಕರಣದ ವಿವರಗಳನ್ನು ಗೌಪ್ಯವಾಗಿಡಲು ನ್ಯಾಯಾಲಯಕ್ಕೆ ಮಸ್ಕ್ ಏಕೆ ಮನವಿ ಮಾಡಿದರು ಎಂಬುದು ಸ್ಪಷ್ಟವಾಗಿಲ್ಲ ಎಂದು ಸಿಎನ್‌ಬಿಸಿ ವರದಿ ಮಾಡಿದೆ.

ಪ್ರತಿ ಷೇರಿಗೆ 54.20 ಡಾಲರ್ ನೀಡುವ ಮೂಲಕ ಟ್ವಿಟರ್‌ ಖರೀದಿಗೆ ಮಸ್ಕ್ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಇತ್ತೀಚೆಗೆ ಟ್ವಿಟ್ಟರ್ ಕಂಪನಿಯು ತನ್ನ ನಕಲಿ ಮತ್ತು ಸ್ಪ್ಯಾಮ್ ಖಾತೆಗಳ ಬಗ್ಗೆ ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿ ಒಪ್ಪಂದವನ್ನು ಮುಕ್ತಾಯಗೊಳಿಸುವುದಾಗಿ ಘೋಷಿಸಿದ್ದರು.

ADVERTISEMENT

ಟ್ವಿಟರ್ ಖರೀದಿ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಮಸ್ಕ್ ಬೆದರಿಕೆ ಹಾಕಿದ್ದ ಬೆನ್ನಲ್ಲೇ ಟ್ವಿಟರ್ ದಿನಕ್ಕೆ 1 ಮಿಲಿಯನ್‌ಗಿಂತಲೂ ಹೆಚ್ಚು ಸ್ಪ್ಯಾಮ್ ಖಾತೆಗಳನ್ನು ಅಮಾನತುಗೊಳಿಸುತ್ತಿರುವುದಾಗಿ ಬಹಿರಂಗಪಡಿಸಿತ್ತು.

ಈ ಮಧ್ಯೆ, ಟ್ವಿಟರ್ ಮತ್ತು ಇಲಾನ್ ಮಸ್ಕ್ ನಡುವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 17ರಿಂದ ಐದು ದಿನಗಳ ವಿಚಾರಣೆಗೆ ಅಮೆರಿಕದ ನ್ಯಾಯಾಧೀಶರು ಸಮಯ ನಿಗದಿ ಮಾಡಿದ್ದಾರೆ.

ಡೆಲವೇರ್ ಕೋರ್ಟ್ ಆಫ್ ಚಾನ್ಸೆರಿಯ ನ್ಯಾಯಾಧೀಶರಾದ ಕ್ಯಾಥಲೀನ್ ಮೆಕ್‌ಕಾರ್ಮಿಕ್ ಅವರು ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ,

ಟ್ವಿಟರ್ ಸಂಸ್ಥೆಯು ಅಕ್ಟೋಬರ್ 10ರಂದು ವಿಚಾರಣೆಯನ್ನು ಪ್ರಾರಂಭಿಸಲು ಬಯಸಿತ್ತು, ಆದರೆ, ಮಸ್ಕ್ ಅವರ ಮನವಿ ಮೇರೆಗೆ ವಿಚಾರಣೆಯನ್ನು ಅಕ್ಟೊಬರ್ 17ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.