ವಾಷಿಂಗ್ಟನ್: ಎಚ್–1ಬಿ ವೀಸಾ ಕುರಿತಂತೆ ಶತಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ ‘ಮೃದು ನಿಲುವು’ ತಳೆದಿದ್ದು, ಈ ವೀಸಾ ನೀಡಿಕೆ ವಿಚಾರದಲ್ಲಿ ವ್ಯಾಪಕ ಸುಧಾರಣೆಗಳ ಅಗತ್ಯವಿದೆ ಎಂದಿದ್ದಾರೆ.
ತಮ್ಮ ಒಡೆತನದ ಸ್ಪೇಸ್ ಎಕ್ಸ್ ಹಾಗೂ ಟೆಸ್ಲಾ ಸೇರಿದಂತೆ ಕೌಶಲಯುಳ್ಳ ಉದ್ಯೋಗಿಗಳ ನೇಮಕಾತಿ ಬಯಸುವ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳಿಗೆ ವಿದೇಶಿ ಅಭ್ಯರ್ಥಿಗಳು ಬೇಕು ಎಂದು ಕಳೆದ ವಾರ ಮಸ್ಕ್ ಹೇಳಿದ್ದರು.
‘ನೂರಾರು ದೊಡ್ಡ ಕಂಪನಿಗಳನ್ನು ಸ್ಥಾಪಿಸಿರುವ ನಾನು ಹಾಗೂ ಇತರ ನೂರಾರು ಉದ್ಯಮಿಗಳು ಅಮೆರಿಕದಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಎಚ್–1ಬಿ ವೀಸಾ ಕಾರಣ’ ಎಂದು ಅವರು ಕಳೆದ ವಾರ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದರು.
ಮಸ್ಕ್ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ‘ಎಕ್ಸ್’ ಬಳಕೆದಾರರೊಬ್ಬರು, ‘ಅಮೆರಿಕ ವಿಶ್ವದ ಪ್ರತಿಭಾವಂತರಿರುವ ದೇಶವಾಗಬೇಕು ಎಂಬುದು ಸರಿ. ಆದರೆ, ಇದಕ್ಕೆ ಎಚ್–1ಬಿ ವೀಸಾ ಕಾರ್ಯಕ್ರಮ ಪರಿಹಾರವಾಗದು’ ಎಂದು ವಾದಿಸಿದ್ದರು.
ಮಸ್ಕ್ ತಮ್ಮ ನಿಲುವನ್ನು ಬದಲಿಸಲು ಈ ಪೋಸ್ಟ್ ಕೂಡ ಕಾರಣಗಳಲ್ಲೊಂದು ಎಂದು ಹೇಳಲಾಗುತ್ತಿದೆ.
ಎಚ್–1ಬಿ, ವಲಸೆಯೇತರ ವೀಸಾ ಆಗಿದ್ದು, ಅಮೆರಿಕದ ಕಂಪನಿಗಳು ವಿಶೇಷ ಕೌಶಲಹೊಂದಿದ ವಿದೇಶಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವುದಕ್ಕೆ ಇದು ನೆರವಾಗುತ್ತದೆ.
ಉದ್ಯೋಗ ಅರಸಿ ಅಮೆರಿಕಕ್ಕೆ ಹೋಗುವ ಭಾರತ ಮತ್ತು ಚೀನಾದ ಅಭ್ಯರ್ಥಿಗಳಿಗೆ ಈ ವೀಸಾದಿಂದ ಹೆಚ್ಚು ಪ್ರಯೋಜನವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.