ADVERTISEMENT

ಎಪ್‌ಸ್ಟೈನ್‌–ಟ್ರಂಪ್‌ ನಂಟು: 3 ಹೊಸ ಇ–ಮೇಲ್‌ ಬಹಿರಂಗ

ಏಜೆನ್ಸೀಸ್
Published 13 ನವೆಂಬರ್ 2025, 15:46 IST
Last Updated 13 ನವೆಂಬರ್ 2025, 15:46 IST
ಜೆಫ್ರಿ ಎಪ್‌ಸ್ಟೈನ್
ಜೆಫ್ರಿ ಎಪ್‌ಸ್ಟೈನ್   

ವಾಷಿಂಗ್ಟನ್‌: ‘ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಅಪರಾಧಿಯಾಗಿದ್ದ ಉದ್ಯಮಿ ಜೆಫ್ರಿ ಎಸ್‌ಸ್ಟೈನ್‌ನ ದುಷ್ಕೃತ್ಯಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರಿಗೆ ಗೊತ್ತಿತ್ತು’ ಎಂಬುದು ಸೇರಿ ಹಲವು ವಿಚಾರಗಳನ್ನು ಒಳಗೊಂಡ ಇ–ಮೇಲ್‌ಗಳು ಬಹಿರಂಗಗೊಂಡಿವೆ. ಈ ಬೆಳವಣಿಗೆಯು ಟ್ರಂಪ್‌ ಅವರನ್ನು ಪೇಚಿಗೆ ಸಿಲುಕಿಸಲಿದೆ ಎನ್ನಲಾಗುತ್ತಿದೆ.

‘ಟ್ರಂಪ್‌ಗೆ ಬಾಲಕಿಯರ ಬಗ್ಗೆ ಗೊತ್ತಿತ್ತು’ ಎಂಬುದು ಲೇಖಕರೊಬ್ಬರಿಗೆ ಎಪ್‌ಸ್ಟೈನ್‌ ಕಳುಹಿಸಿದ್ದ ಒಂದು ಇ–ಮೇಲ್‌ನಲ್ಲಿ ಇದೆ. 

ಅಮೆರಿಕ ಸಂಸತ್‌ನ ಸದನ ಮೇಲ್ವಿಚಾರಣಾ ಸಮಿತಿಯೊಂದರ ಸದಸ್ಯರಾಗಿರುವ ಡೆಮಾಕ್ರಟಿಕ್‌ ಪಕ್ಷದ ಸಂಸದರು ಹೊಸದಾಗಿ ಬಿಡುಗಡೆ ಮಾಡಿರುವ ಮೂರು ಇ–ಮೇಲ್‌ಗಳು ರಾಜಕೀಯ ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ.

ADVERTISEMENT

ಆದರೆ, ಡೆಮಾಕ್ರಟಿಕ್ ಸದಸ್ಯರ ಆರೋಪಗಳನ್ನು ಟ್ರಂಪ್‌ ತಳ್ಳಿ ಹಾಕಿದ್ದಾರೆ. ‘ತಮ್ಮ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯುವುದಕ್ಕಾಗಿ ಇಂಥ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ‘ಟ್ರುತ್‌ ಸೋಷಿಯಲ್‌’ನಲ್ಲಿ ಟೀಕಿಸಿದ್ದಾರೆ.

ಇನ್ನೊಂದೆಡೆ, ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು (ಎಪ್‌ಸ್ಟೈನ್‌ ಫೈಲ್‌ ಎಂದು ಕರೆಯಲಾಗುತ್ತದೆ) ಬಿಡುಗಡೆ ಮಾಡುವಂತೆ ನ್ಯಾಯ ಇಲಾಖೆ ಮೇಲೆ ಒತ್ತಡ ಹೇರಲಾಗುವುದು. ಈ ವಿಚಾರವನ್ನು ಮುಂದಿನ ವಾರ ಮತಕ್ಕೆ ಹಾಕಲಾಗುವುದು ಎಂದು ಸ್ಪೀಕರ್ ಮೈಕ್ ಜಾನ್ಸನ್‌ ಹೇಳಿದ್ದಾರೆ.

ಆರೋಪಗಳೇನು?: ಲೈಂಗಿಕ ವೃತ್ತಿಗೆ ಬಾಲಕಿಯರನ್ನು ಅಕ್ರಮವಾಗಿ ಸಾಗಿಸಿದ ಆರೋಪಕ್ಕಾಗಿ ಜೆಫ್ರಿಯನ್ನು ಬಂಧಿಸಲಾಗಿತ್ತು. 2019ರಲ್ಲಿ ಕಾರಾಗೃಹದಲ್ಲಿ ನೇಣು ಹಾಕಿಕೊಂಡು ಜೆಫ್ರಿ ಎಸ್‌ಸ್ಟೈನ್‌ ಆತ್ಮಹತ್ಯೆ ಮಾಡಿಕೊಂಡಿದ್ದ.

ಜೆಫ್ರಿ, ಬಾಲಕಿಯರ ಕಳ್ಳಸಾಗಣೆ ಮಾಡುತ್ತಿರುವ ಕುರಿತು ತಮಗೆ ಮಾಹಿತಿ ಇಲ್ಲ ಎಂದೇ ಟ್ರಂಪ್‌ ಹೇಳಿಕೊಂಡು ಬಂದಿದ್ದಾರೆ.

ಆದರೆ, ತಮ್ಮ ಬಹುಕಾಲದ ಸಹವರ್ತಿ ಘಿಸ್ಲೇನ್ ಮ್ಯಾಕ್ಸ್‌ವೆಲ್‌ ಅವರಿಗೆ ಎಸ್‌ಸ್ಟೈನ್‌ ಅವರು 2011ರ ಏಪ್ರಿಲ್‌ನಲ್ಲಿ ಇ–ಮೇಲ್‌ವೊಂದನ್ನು ಕಳುಹಿಸಿದ್ದರು.‘ಟ್ರಂಪ್ ನನ್ನ ನಿವಾಸದಲ್ಲಿ ಒಬ್ಬ ಮಹಿಳೆಯೊಂದಿಗೆ ಬಹಳ ಹೊತ್ತು ಕಳೆದಿದ್ದರು’ ಎಂದು ಇ–ಮೇಲ್‌ನಲ್ಲಿ ತಿಳಿಸಿದ್ದ.

2019ರ ಜನವರಿ 31ರಂದು ಲೇಖಕ ಮೈಕೆಲ್ ವೋಲ್ಫ್‌ ಅವರಿಗೆ ಕಳುಹಿಸಿದ್ದ ಇ–ಮೇಲ್‌ನಲ್ಲಿ, ‘ಆತನಿಗೆ (ಟ್ರಂಪ್) ಬಾಲಕಿಯರ ಕುರಿತು ಗೊತ್ತಿತ್ತು’ ಎಂದು ತಿಳಿಸಿದ್ದ.

ಡೊನಾಲ್ಡ್‌ ಟ್ರಂಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.