ADVERTISEMENT

ಅದಾನಿ ಕಂಪನಿಯಿಂದ ವಿದ್ಯುತ್ ಖರೀದಿ ಅರ್ಧದಷ್ಟು ಕಡಿಮೆ ಮಾಡಿದ ಬಾಂಗ್ಲಾ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 15:28 IST
Last Updated 2 ಡಿಸೆಂಬರ್ 2024, 15:28 IST
ಗೌತಮ್‌ ಅದಾನಿ
ಗೌತಮ್‌ ಅದಾನಿ   

ಢಾಕಾ (ಬಾಂಗ್ಲಾದೇಶ): ಭಾರತದ ಅದಾನಿ ಪವರ್ ಕಂಪನಿಯಿಂದ ಖರೀದಿಸುತ್ತಿರುವ ವಿದ್ಯುತ್‌ ಪ್ರಮಾಣದಲ್ಲಿ ಅರ್ಧದಷ್ಟನ್ನು ಕಡಿಮೆ ಮಾಡಿರುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. 

ಚಳಿಗಾಲದಲ್ಲಿ ಬೇಡಿಕೆ ಇಳಿಮುಖವಾಗಿರುವುದರಿಂದ ಖರೀದಿಸುತ್ತಿರುವ ವಿದ್ಯುತ್‌ನ ಪ್ರಮಾಣವನ್ನು ಅರ್ಧದಷ್ಟು ತಗ್ಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನೂರಾರು ದಶಲಕ್ಷ ಡಾಲರ್‌ನಷ್ಟು ಬಾಕಿಯನ್ನು ಬಾಂಗ್ಲಾದೇಶದ ವಿದ್ಯುತ್ ಮಂಡಳಿ ಉಳಿಸಿಕೊಂಡಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. 

ದೊಡ್ಡ ಮೊತ್ತದ ಯೋಜನೆ ಪಡೆಯಲು ಭ್ರಷ್ಟಾಚಾರಕ್ಕೆ ಮುಂದಾಗಿರುವ ಪ್ರಕರಣದಲ್ಲಿ ಅಮೆರಿಕದ ನ್ಯಾಯಾಲಯವು ಅದಾನಿ ಅವರನ್ನು ದೋಷಿ ಎಂದು ಹೇಳಿದ್ದು, ಅದನ್ನು ಅದಾನಿ ಅಲ್ಲಗಳೆದಿದ್ದಾರೆ. 

ADVERTISEMENT

ವಿದ್ಯುತ್ ಪೂರೈಕೆಯ ಬಾಕಿ ಹಣ ಬೆಳೆದಿದೆ ಎಂಬ ಕಾರಣಕ್ಕೆ ಅಕ್ಟೋಬರ್ 31ರಂದು ಅದಾನಿ ಕಂಪನಿಯು  ದಿಢೀರನೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿತ್ತು. ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿಯ (ಬಿಪಿಡಿಬಿ) ಅಧಿಕಾರಿಗಳಲ್ಲಿ ಇದು ಅಚ್ಚರಿ ಮೂಡಿಸಿತ್ತು. 

‘ಚಳಿಗಾಲ ಶುರುವಾದ ಒಂದು ತಿಂಗಳಲ್ಲಿ ಬಿಪಿಡಿಬಿ 1000 ಮೆಗಾವಾಟ್ ವಿದ್ಯುತ್ ಅನ್ನು ಅದಾನಿ ವಿದ್ಯುತ್ ಕಂಪನಿಯಿಂದ ಖರೀದಿಸಿತ್ತು. ಹಿಂದಿನ ಪ್ರಮಾಣದಲ್ಲಿಯೇ ಮತ್ತೆ ಯಾವಾಗ ವಿದ್ಯುತ್ ಖರೀದಿಸುವಿರಿ ಎಂದು ಆಗ ಬಿಪಿಡಿಬಿ ಅಧಿಕಾರಿಗಳನ್ನು ಕೇಳಿದ್ದೆವು. ಆದರೆ, ಅದಕ್ಕೆ ಉತ್ತರ ಸಿಕ್ಕಿಲ್ಲ. ಅಷ್ಟೊಂದು ಬಾಕಿ ಉಳಿಸಿಕೊಂಡರೆ ಕಂಪನಿ ನಿರ್ವಹಣೆಗೆ ತೊಂದರೆಯಾಗುತ್ತದೆ’ ಎಂದು ಅದಾನಿ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

‘ವಿದ್ಯುತ್ ಖರೀದಿಯ ಬಾಕಿ ಮೊತ್ತವನ್ನು ಪಾವತಿ ಮಾಡುವಂತೆ ಬಿಪಿಡಿಬಿ ಹಿರಿಯ ಅಧಿಕಾರಿಗಳನ್ನು ಹಾಗೂ ಅಲ್ಲಿನ ಸರ್ಕಾರದ ಅಧಿಕಾರಿಗಳನ್ನು ಕೇಳಿಕೊಂಡಿದ್ದೇವೆ. ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿಲ್ಲ. ಸದ್ಯದಲ್ಲೇ ಬಾಕಿ ಹಣ ಸಂದಾಯವಾಗುವ ನಿರೀಕ್ಷೆ ಇದೆ’ ಎಂದೂ ಹೇಳಿದ್ದಾರೆ.

ಶೇಖ್ ಹಸೀನಾ ಪ್ರಧಾನಿಯಾಗಿದ್ದಾಗ, ಇಪ್ಪತ್ತೈದು ವರ್ಷಗಳ ಅವಧಿಗೆ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಸುವ ಒಪ್ಪಂದವನ್ನು ಅದಾನಿ ಕಂಪನಿಯು 2017ರಲ್ಲಿ ಮಾಡಿಕೊಂಡಿತ್ತು. 

ಬಿಪಿಡಿಬಿ ಅಧ್ಯಕ್ಷ ಮೊಹಮ್ಮದ್ ರಿಜಾಉಲ್ ಕರೀಮ್ ಅವರ ಪ್ರಕಾರ, 650 ದಶಲಕ್ಷ ಡಾಲರ್ (₹5500 ಕೋಟಿಗೂ ಹೆಚ್ಚು) ಬಾಕಿಯನ್ನು ಅದಾನಿ ಕಂಪನಿಗೆ ನೀಡಬೇಕಿದೆ. ನವೆಂಬರ್‌ನಲ್ಲಿ 85 ದಶಲಕ್ಷ ಡಾಲರ್ (ಸುಮಾರು ₹720 ಕೋಟಿ) ಹಾಗೂ ಅಕ್ಟೋಬರ್‌ನಲ್ಲಿ 97 ದಶಲಕ್ಷ ಡಾಲರ್ (ಸುಮಾರು ₹821 ಕೋಟಿ) ಪಾವತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.