ADVERTISEMENT

ಕೊರೊನಾ ಸೋಂಕು: ದಾರಿತಪ್ಪಿಸುವ ಟ್ರಂಪ್‌ ಸಂದೇಶ- ತಜ್ಞರ ಅಭಿಮತ

ಸುರಕ್ಷತಾ ಕ್ರಮ ಕಡ್ಡಾಯಗೊಳಿಸಲು ಸಲಹೆ

ಏಜೆನ್ಸೀಸ್
Published 7 ಅಕ್ಟೋಬರ್ 2020, 7:25 IST
Last Updated 7 ಅಕ್ಟೋಬರ್ 2020, 7:25 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್‌: ಕೊರೊನಾ ವೈರಸ್‌ ಸೋಂಕಿನ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನೀಡುತ್ತಿರುವ ಸಲಹೆಗಳು ಜನರನ್ನು ದಾರಿತಪ್ಪಿಸುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಜ್ಞರ ಪ್ರಕಾರ ಕೋರೊನಾ ಸೋಂಕಿನಿಂದ ವಿಶ್ವದಾದ್ಯಂತ 10 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಇದು ಜನರಲ್ಲಿ ಆತಂಕ ಮತ್ತು ಭಯವನ್ನು ಸೃಷ್ಟಿಸಿದೆ.

ಕೊರೊನಾ ಸೋಂಕಿನಿಂದ ಗುಣಮುಖರಾಗಿ ಶ್ವೇತಭವನಕ್ಕೆ ಮರಳಿದ ಟ್ರಂಪ್ ಅವರು ವಿಡಿಯೊ ಮೂಲಕ ಸಾರ್ವಜನಿಕರಿಗೆ ಸಂದೇಶ ಕಳುಹಿಸಿದ್ದಾರೆ. ಅದರಲ್ಲಿ ‘ಕೊರೊನಾ ವೈರಸ್‌ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಆ ವೈರಸ್‌ಗೆ ಹೆದರಬೇಡಿ. ಖಂಡಿತಾ ನೀವು ಅದನ್ನು ಸೋಲಿಸುತ್ತೀರಿ‘ ಎಂದು ಹೇಳಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ತಜ್ಞರು, ‘ಈಗಷ್ಟೇ ಗುಣಮುಖರಾಗುತ್ತಿರುವ ಟ್ರಂಪ್ ಅವರ ಸಲಹೆಗಳ ಹೊರತಾಗಿಯೂ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ಅಮೆರಿಕದಲ್ಲೇ 2,10,000 ಮಂದಿಗೆ ಕೊರೊನಾ ವೈರಸ್‌ ಅನ್ನು ಸೋಲಿಸಲಾಗಿಲ್ಲ. ಪ್ರತಿ ದಿನ 700ಕ್ಕೂ ಹೆಚ್ಚು ಮಂದಿ ಈ ಕೋವಿಡ್‌ನಿಂದ ಸಾವಿಗೀಡಾಗುತ್ತಿದ್ದಾರೆ.

ಕೋವಿಡ್‌– 19, ಫ್ಲ್ಯೂಗಿಂತ ಅಪಾಯಕಾರಿಯಾಗಿದೆ. ಅಮೆರಿಕದಲ್ಲಿ 2010ರಿಂದ ಪ್ರತಿ ವರ್ಷ 12 ಸಾವಿರದಿಂದ 61 ಸಾವಿರ ಮಂದಿ ಫ್ಲ್ಯೂ ರೋಗಕ್ಕೆ ತುತ್ತಾಗಿದ್ದಾರೆ ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ಹೇಳಿದೆ.

ಕೊರೊನಾ ಸೋಂಕು ತಗುಲಿದ ಬಹುಪಾಲು ಜನರಲ್ಲಿ ಸೌಮ್ಯ ರೋಗ ಲಕ್ಷಗಳು ಕಂಡುಬಂದಿವೆ. ಆದರೆ ಯಾವ ರೋಗಿಗಳಲ್ಲಿ ಈ ವೈರಸ್‌ ಅಪಾಯಕಾರಿ ಅಥವಾ ಮಾರಕ ಎಂದು ತಜ್ಞರು ಅಂದಾಜಿಸಲಾಗುತ್ತಿಲ್ಲ. ಈ ನಡುವೆ ಅಮೆರಿಕದಲ್ಲಿ ಸೋಂಕು ತಗುಲಿರುವವರಲ್ಲಿ ಸಾವಿಗೀಡಾಗುತ್ತಿರುವವರ ಸಂಖ್ಯೆ ಶೇಕಡವಾರು ಕಡಿಮೆ ಇದೆ. ಅಂದರೆ, ಬಹುಪಾಲು ಜನರು ಇನ್ನೂ ಸೋಂಕು ತಗಲುವ ಅಪಾಯದಲ್ಲಿದ್ದಾರೆ ಎಂದು ಹೇಳಿದೆ.

ಟ್ರಂಪ್ ಅವರು ವಿಡಿಯೊ ಸಂದೇಶದಲ್ಲಿ ಹೇಳಿರುವಂತೆ ಈ ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಔಷಧಗಳಿವೆ. ಆದರೆ, ಆ ಔಷಧಗಳು ಕೊರೊನಾ ಸೋಂಕಿತ ವ್ಯಕ್ತಿಯು ತೀವ್ರ ಅನಾರೋಗ್ಯಕ್ಕೀಡಾಗುವುದನ್ನು ಹಾಗೂ ಸಾವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆಯೇ ಹೊರತು, ಕೊರೊನಾ ಸೋಂಕನ್ನು ಪೂರ್ಣ ಪ್ರಮಾಣದಲ್ಲಿ ಗುಣಪಡಿಸುವುದಿಲ್ಲ. ಹೀಗಾಗಿ ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಯಾವಾಗ ಪರಿಣಾಮಕಾರಿಯಾದ ಲಸಿಕೆ ಲಭ್ಯವಾಗುತ್ತದೆ ಎಂಬ ಖಚಿತವಾದ ದಿನಾಂಕವೂ ಇಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರತಿ ನಿತ್ಯ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ನಾರ್ಥ್‌ವೆಸ್ಟರ್ನ್‌ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಖಾಲಿಲಾ ಗೇಟ್ಸ್‌ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.