ADVERTISEMENT

ಇಸ್ರೇಲ್ ದಾಳಿಯಲ್ಲಿ ಇರಾನ್ IRGC ಮುಖ್ಯಸ್ಥನ ಹತ್ಯೆ: ಯಾರು ಈ ಹೊಸೈನ್ ಸಲಾಮಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2025, 11:33 IST
Last Updated 13 ಜೂನ್ 2025, 11:33 IST
<div class="paragraphs"><p>ಹೊಸೈನ್‌ ಸಲಾಮಿ</p></div>

ಹೊಸೈನ್‌ ಸಲಾಮಿ

   

ರಾಯಿಟರ್ಸ್‌ ಚಿತ್ರ

ಇಸ್ರೇಲ್‌ ಸೇನಾ ಪಡೆಗಳು ಇರಾನ್‌ ರಾಜಧಾನಿ ಟೆಹರಾನ್‌ ಮೇಲೆ ಶುಕ್ರವಾರ ಮುಂಜಾನೆಯೇ ಭಾರಿ ದಾಳಿ ನಡೆಸಿವೆ.

ADVERTISEMENT

ಇರಾನ್‌ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಪ್ರಕಾರ, ಪ್ರಬಲ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ (IRGC) ಮುಖ್ಯಸ್ಥ ಹೊಸೈನ್‌ ಸಲಾಮಿ ಸೇರಿದಂತೆ ಸಾಕಷ್ಟು ಮಂದಿ ಹತ್ಯೆಯಾಗಿದ್ದಾರೆ ಎನ್ನಲಾಗಿದೆ.

ಉಭಯ ರಾಷ್ಟ್ರಗಳ ನಡುವಣ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಯಾರು ಈ ಸಲಾಮಿ ಎಂಬುದು ಕುತೂಹಲ ಕೆರಳಿಸಿದೆ.

ದಾಳಿಯಲ್ಲಿ ಮೃತಪಟ್ಟ ಅತ್ಯಂತ ಹಿರಿಯ ನಾಯಕ ಎನಿಸಿರುವ ಸಲಾಮಿ, ಗೊಲ್ಪಾಯೆಗನ್‌ ನಗರದಲ್ಲಿ 1960ರಲ್ಲಿ ಜನಿಸಿದ್ದರು.

ಸಿಎನ್ಎನ್‌ ವರದಿ ಪ್ರಕಾರ, 1979ರಲ್ಲಿ ಇರಾನ್‌ ಕ್ರಾಂತಿ ನಂತರ IRGC ಸೇರಿದ್ದ ಸಲಾಮಿ, ಇಸ್ಫಾಹನ್‌ ಶಾಖೆ ಸೇರಿ ಕುರ್ದಿಸ್ತಾನ್‌ನಿಂದ ಇರಾಕ್‌ ವಿರುದ್ಧ ಹೋರಾಟ ನಡೆಸಿದ್ದರು. 1980ರ ದಶಕದಲ್ಲಿ ಆರಂಭವಾದ ಇರಾನ್‌–ಇರಾಕ್‌ ಕದನದ ಸಂದರ್ಭದಲ್ಲಿ ಅವರ ಖ್ಯಾತಿ ಹೆಚ್ಚಾಗಿತ್ತು.

ಇರಾನ್‌ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು ಸಲಾಮಿ ಅವರನ್ನು IRGC ಮುಖ್ಯಸ್ಥರನ್ನಾಗಿ 2019ರಲ್ಲಿ ನೇಮಿಸಿದ್ದರು. ಅದಕ್ಕೂ ಮುನ್ನ ಡೆಪ್ಯುಟಿ ಕಮಾಂಡರ್‌ ಆಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.

ಖಮೇನಿ ಅವರ ಮೇಲೆ ಅಪಾರ ನಿಷ್ಠೆ ಹೊಂದಿದ್ದ ಸಲಾಮಿ, ಇರಾನ್‌ ಸೇನೆಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಖ್ಯವಾಗಿ ಪ್ರಾದೇಶಿಕ ಪ್ರಭಾವ ಹೆಚ್ಚಿಸುವುದು ಹಾಗೂ ಸುಧಾರಿತ ಕ್ಷಿಪಣಿ ಯೋಜನೆಗಳಿಗೆ ಒತ್ತು ನೀಡಿದ್ದರು.

ಇರಾನ್‌ ಸೇನಾ ಸಾಮರ್ಥ್ಯವನ್ನು ಜಗತ್ತಿಗೆ ಸಾರುವ ಸಲುವಾಗಿ ಹಲವು ಸುಧಾರಣಾ ಕ್ರಮಗಳಿಗೆ ಒತ್ತು ನೀಡಿದ್ದ ಸಲಾಮಿ, ಇಸ್ರೇಲ್‌, ಅಮೆರಿಕ ಹಾಗು ಕೊಲ್ಲಿ ರಾಷ್ಟ್ರಗಳ ವಿಚಾರದಲ್ಲಿ ಹೊಂದಿದ್ದ ಅಕ್ರಮಣಶೀಲ ಮನೋಭಾವದಿಂದಲೇ ಹೆಚ್ಚಾಗಿ ಗುರುತಿಸಿಕೊಂಡಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.  

ಸಲಾಮಿ ಅವರ ನಾಯಕತ್ವದಲ್ಲಿ ಇರಾನ್‌ ಸೇನೆಯ ಶಸ್ತ್ರಾಗಾರ ಮತ್ತು ಸಂಖ್ಯಾಬಲ ಹೆಚ್ಚಾಗಿತ್ತು. ಮಧ್ಯಪ್ರಾಚ್ಯದುದ್ದಕ್ಕೂ ಇರುವ ಪ್ರಾಕ್ಸಿ ಪಡೆಗಳೊಂದಿಗೆ ಇರಾನ್‌ ಸೇನೆ ಬಾಂಧವ್ಯ ವೃದ್ಧಿಸಿಕೊಂಡಿತ್ತು.

ಇರಾನ್‌ ಪಡೆಗಳು ಕಳೆದ ವರ್ಷ ಏಪ್ರಿಲ್ ಮತ್ತು ಅಕ್ಟೋಬರ್‌ನಲ್ಲಿ ಇಸ್ರೇಲ್‌ ಮೇಲೆ ನೂರಾರು ಡ್ರೋನ್‌ಗಳು, ಕ್ಷಿಪಣಿಗಳನ್ನು ಉಡಾಯಿಸಿದ್ದವು. ಇದು, ಇಸ್ರೇಲ್‌ ಮೇಲೆ ಇರಾನ್‌ ನಡೆಸಿದ ಮೊದಲ ನೇರ ದಾಳಿ ಎನ್ನಲಾಗಿದೆ. ಈ ದಾಳಿಯ ರೂವಾರಿ ಇದೇ ಸಲಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.