ADVERTISEMENT

ಫೇಸ್‌ಬುಕ್ ಲೈವ್‌ ಸ್ಟ್ರೀಮಿಂಗ್ ನಿಯಮ ಬಿಗಿ ಸಾಧ್ಯತೆ

ಕ್ರೈಸ್ಟ್‌ಚರ್ಚ್‌ ಗುಂಡಿನ ದಾಳಿ ಪರಿಣಾಮ

ಏಜೆನ್ಸೀಸ್
Published 30 ಮಾರ್ಚ್ 2019, 13:34 IST
Last Updated 30 ಮಾರ್ಚ್ 2019, 13:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಾನ್‌ ಫ್ರಾನ್ಸಿಸ್ಕೊ: ನೇರ ಪ್ರಸಾರ (ಲೈವ್‌ ಸ್ಟ್ರೀಮಿಂಗ್)ನಿಯಮಗಳನ್ನು ಬಿಗಿಗೊಳಿಸುವುದಾಗಿ ಸಾಮಾಜಿಕ ಜಾಲತಾಣ ಕಂಪನಿ ಫೇಸ್‌ಬುಕ್ ಶನಿವಾರ ತಿಳಿಸಿದೆ.

ನ್ಯೂಜಿಲೆಂಡ್‌ನಕ್ರೈಸ್ಟ್‌ಚರ್ಚ್‌ ನಗರದ ಮಸೀದಿಯಲ್ಲಿ ಇತ್ತೀಚೆಗೆ ನಡೆದಿದ್ದ ಉಗ್ರ ದಾಳಿ ಫೇಸ್‌ಬುಕ್ ಮೂಲಕ ನೇರ ಪ್ರಸಾರವಾಗಿತ್ತು. ದಾಳಿಕೋರದೇಹಕ್ಕೆ ಧರಿಸಿದ ಕ್ಯಾಮರಾ ಬಳಸಿ ಘಟನೆಯನ್ನು ಫೇಸ್‌ಬುಕ್‌ ಮೂಲಕ ನೇರಪ್ರಸಾರ ಮಾಡಿದ್ದ.

‘ಘಟನೆಯ ಭೀಕರ ವಿಡಿಯೊವನ್ನು ಹಂಚಿಕೊಳ್ಳಲು ಫೇಸ್‌ಬುಕ್‌ನಂತಹ ಆನ್‌ಲೈನ್ ಮಾಧ್ಯಮ ಬಳಕೆಯಾಗಿದ್ದನ್ನು ಅನೇಕ ಮಂದಿ ಪ್ರಶ್ನಿಸಿದ್ದರು’ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಷೆರಿಲ್ ಸ್ಯಾಂಡ್‌ಬರ್ಗ್‌ ಆನ್‌ಲೈನ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.

‘ಉಗ್ರ ದಾಳಿಯ ಹಿನ್ನೆಲೆಯಲ್ಲಿ ನೇರ ಪ್ರಸಾರ ನಿಯಮ ಬಿಗಿಗೊಳಿಸಲು, ನಮ್ಮ ತಾಣಗಳ ಮೂಲಕ ದ್ವೇಷ ಹರಡುವುದನ್ನು ತಡೆಯಲು ಮತ್ತು ನ್ಯೂಜಿಲೆಂಡ್‌ ಸಮುದಾಯಕ್ಕೆ ಬೆಂಬಲ ನೀಡಲು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ನಿಯಮಗಳನ್ನು ಮೀರಿ ನೇರ ಪ್ರಸಾರ ಮಾಡಿದವರ ಖಾತೆಗಳನ್ನು ಬ್ಲಾಕ್‌ ಮಾಡುವ ಬಗ್ಗೆಯೂ ಫೇಸ್‌ಬುಕ್ ಚಿಂತನೆ ನಡೆಸುತ್ತಿದೆ. ಹಿಂಸೆಗೆ ಸಂಬಂಧಿಸಿದ ಸಂಕಲಿತ ವಿಡಿಯೊ ಮತ್ತು ಚಿತ್ರಗಳನ್ನು ಕ್ಷಿಪ್ರ ಪತ್ತೆಹಚ್ಚುವ ನಿಟ್ಟಿನಲ್ಲಿ ಸಾಫ್ಟ್‌ವೇರ್ ಸುಧಾರಣೆ ಮಾಡಲೂ ಹೂಡಿಕೆ ಮಾಡುತ್ತಿದೆ ಎಂದೂ ಅವರು ಹೇಳಿದ್ದಾರೆ.

ಕ್ರೈಸ್ಟ್‌ಚರ್ಚ್‌ ದಾಳಿಗೆ ಸಂಬಂಧಿಸಿ ಮೊದಲ 24 ಗಂಟೆಗಳಲ್ಲಿ ಫೇಸ್‌ಬುಕ್ 15 ಲಕ್ಷಕ್ಕೂ ಹೆಚ್ಚಿನ ವಿಡಿಯೊಗಳನ್ನು ತೆಗೆದುಹಾಕಿತ್ತು. ದಾಳಿಕೋರನಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ವೈಯಕ್ತಿಕ ಖಾತೆ ಸ್ಥಗಿತಗೊಳಿಸಿ, ಅದರಲ್ಲಿದ್ದ ವಿಡಿಯೊವನ್ನೂ ತೆಗೆದುಹಾಕಿತ್ತು. ಆದರೂ ಫೇಸ್‌ಬುಕ್ ವಿರುದ್ಧ ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ದಾಳಿಯಲ್ಲಿ ಏಳು ಭಾರತೀಯರು ಸೇರಿ ಸುಮಾರು 50 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.