ADVERTISEMENT

ಕೋವಿಡ್‌ ಲಸಿಕೆ ಪ್ರಯೋಗ ಯಶಸ್ವಿ: ಅಂತಿಮ ಪರೀಕ್ಷೆಗೆ ಸಿದ್ಧತೆ

ಏಜೆನ್ಸೀಸ್
Published 15 ಜುಲೈ 2020, 6:26 IST
Last Updated 15 ಜುಲೈ 2020, 6:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಕೋವಿಡ್‌–19ಗೆ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಅಮೆರಿಕದಲ್ಲಿ ಮಾನವರ ಮೇಲೆ ಪ್ರಯೋಗ ನಡೆಸಲಾಗಿದ್ದು, ಈ ಲಸಿಕೆಯು ವಿಜ್ಞಾನಿಗಳು ನಿರೀಕ್ಷಿಸಿದ ಮಟ್ಟದಲ್ಲೇ ಸೋಂಕಿತರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿದೆ. ಈಗ ಆದರ ಅಂತಿಮ ಹಂತದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.

‘ಹೇಗೆ ವಿಶ್ಲೇಷಿಸಿದರೂ ಇದೊಂದು ಒಳ್ಳೆಯ ಸುದ್ದಿ’ ಎಂದು ಅಮೆರಿಕ ಸರ್ಕಾರದ ಸಾಂಕ್ರಾಮಿಕ ರೋಗ ತಜ್ಞ ಡಾ. ಆ್ಯಂಟನಿ ಫೌಸಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಸಂತಸ ವ್ಯಕ್ತಪಡಿಸಿದ್ದಾರೆ.

ಫೌಸಿ ಅವರ ಸಹೋದ್ಯೋಗಿಗಳು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ ಆ್ಯಂಡ್‌ ಮೊಡೆರ್ನಾ ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯ ಅಂತಿಮ ಹಂತದ ಪ್ರಯೋಗವನ್ನು ಜುಲೈ 27ರ ವೇಳೆಗೆ ಆರಂಭಿಸಲಾಗುವುದು. ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಈ ಲಸಿಕೆ ಎಷ್ಟು ಪರಿಣಾಮಕಾರಿ ಎಂದು ತಿಳಿಯಲು 30,000 ಮಂದಿಯ ಮೇಲೆ ಇದನ್ನು ಪ್ರಯೋಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಮಾರ್ಚ್‌ ತಿಂಗಳಲ್ಲಿ 45 ಸ್ವಯಂಸೇವಕರ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿತ್ತು. ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ ಎಂಬುದು ಇವರ ಮೇಲಿನ ಪರೀಕ್ಷೆಯಿಂದ ತಿಳಿದುಬಂದಿದೆ. ಕೋವಿಡ್‌ ಸೋಂಕಿಗೆ ಒಳಗಾಗಿ ಬದುಕಿ ಉಳಿದವರಿಗೆ ಹೋಲಿಸಿದರೆ ಈ 45 ಮಂದಿ ಸ್ವಯಂಸೇವಕರ ರಕ್ತದಲ್ಲಿ ಸೋಂಕನ್ನು ತಡೆಯುವ ಪ್ರತಿಕಾಯಗಳು ಅಭಿವೃದ್ಧಿಯಾಗಿರುವುದು ಕಂಡುಬಂದಿದೆ ಎಂದು ಈ ಸಂಶೋಧನಾ ತಂಡ ಹೇಳಿರುವುದಾಗಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ ವರದಿ ಮಾಡಿದೆ.

ವಿಜ್ಞಾನಿಗಳ ಪ್ರಕಾರ ಪ್ರತಿಯೊಬ್ಬರೂ ಒಂದು ತಿಂಗಳ ಅಂತರದಲ್ಲಿ ಲಸಿಕೆಯ ಎರಡು ಡೋಸ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಲಸಿಕೆಗೆ ಸಂಬಂಧಿಸಿದಂತೆ ಈ ವರ್ಷಾಂತ್ಯದೊಳಗೆ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿ ಅಮೆರಿಕ ಸರ್ಕಾರ ಇದೆ. ‌

ಲಸಿಕೆಯಿಂದ ಗಂಭೀರ ಸ್ವರೂಪದ ಅಡ್ಡಪರಿಣಾಮಗಳು ಕಾಣಿಸಲಿಲ್ಲ. ಆದರೆ, ಲಸಿಕೆ ಸ್ವೀಕರಿಸಿದವರಲ್ಲಿ ಅರ್ಧಕ್ಕೂ ಹೆಚ್ಚು ಜನರಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿದೆ. ಇದು ಇತರ ಕೆಲವು ಲಸಿಕೆಗಳ ಜತೆಗೂ ಸಾಮಾನ್ಯವಾಗಿ ಕಂಡುಬರುತ್ತದೆ. ಕೆಲವರಲ್ಲಿ ತೀವ್ರ ತಲೆನೋವು, ಚಳಿ ಜ್ವರ, ಇಂಜೆಕ್ಷನ್‌ ಕೊಟ್ಟ ಜಾಗದಲ್ಲಿ ನೋವು ಕಂಡುಬಂದಿದೆ. ಹೆಚ್ಚಿನ ಡೋಸ್‌ ನೀಡಿದ ಮೂವರು ರೋಗಿಗಳಲ್ಲಿ ಈ ಸಮಸ್ಯೆಗಳು ತೀವ್ರವಾಗಿ ಕಾಣಿಸಿವೆ. ಆದರೆ ಇವೆಲ್ಲ ಒಂದು ದಿನದಲ್ಲಿ ವಾಸಿಯಾಗಿವೆ. ಇವುಗಳಲ್ಲಿ ಕೆಲವು ಲಕ್ಷಣಗಳು ಕೊರೊನಾ ಸೋಂಕಿತರಲ್ಲೂ ಕಂಡುಬರುತ್ತವೆ. ಆದ್ದರಿಂದ ರೋಗದಿಂದ ರಕ್ಷಿಸಿಕೊಳ್ಳಲು ಇಷ್ಟು ಸಣ್ಣ ಬೆಲೆಯನ್ನು ತೆರಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಂತಿಮ ಪರೀಕ್ಷೆಯ ಸಂದರ್ಭದಲ್ಲಿ ಎಲ್ಲಾ ವಯೋಮಾನದವರಿಗೆ ಹಾಗೂ ತೀವ್ರ ಕಾಯಿಲೆಗಳನ್ನು ಹೊಂದಿರುವವರಿಗೂ ಈ ಲಸಿಕೆಯನ್ನು ನೀಡಿ, ಫಲಿತಾಂಶವನ್ನು ಅಧ್ಯಯನ ಮಾಡಲಾಗುವುದು ಎಂದು ಫೌಸಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.