ADVERTISEMENT

ಅಮೆರಿಕ ಮಧ್ಯಸ್ಥಿಕೆ ಯಶಸ್ವಿ: ಇಸ್ರೇಲ್‌ನಿಂದ ಯುಎಇಗೆ ಮೊದಲ ವಿಮಾನ ಹಾರಾಟ ಆರಂಭ

ಅಮೆರಿಕ ಮಧ್ಯಸ್ಥಿಕೆ ಯಶಸ್ವಿ

ಪಿಟಿಐ
Published 31 ಆಗಸ್ಟ್ 2020, 11:02 IST
Last Updated 31 ಆಗಸ್ಟ್ 2020, 11:02 IST
ಇಸ್ರೇಲ್‌ ರಾಜಧಾನಿ ಟೆಲ್‌ ಅವಿವ್‌ನ ಬೆನ್‌ ಗುರಿಯಾನ್‌ ವಿಮಾನನಿಲ್ದಾಣದಿಂದ ಯುಎಇಯ ಅಬುಧಾಬಿಯತ್ತ ಮೊಟ್ಟ ಮೊದಲ ವಾಣಿಜ್ಯ ಉದ್ದೇಶದ ವಿಮಾನ ಸೋಮವಾರ ಪ್ರಯಾಣ ಬೆಳೆಸಿತು –ಎಎಫ್‌ಪಿ ಚಿತ್ರ
ಇಸ್ರೇಲ್‌ ರಾಜಧಾನಿ ಟೆಲ್‌ ಅವಿವ್‌ನ ಬೆನ್‌ ಗುರಿಯಾನ್‌ ವಿಮಾನನಿಲ್ದಾಣದಿಂದ ಯುಎಇಯ ಅಬುಧಾಬಿಯತ್ತ ಮೊಟ್ಟ ಮೊದಲ ವಾಣಿಜ್ಯ ಉದ್ದೇಶದ ವಿಮಾನ ಸೋಮವಾರ ಪ್ರಯಾಣ ಬೆಳೆಸಿತು –ಎಎಫ್‌ಪಿ ಚಿತ್ರ   

ಟೆಲ್‌ ಅವಿವ್‌:ಇಸ್ರೇಲ್‌ ಮತ್ತು ಸಂಯುಕ್ತ ಅರಬ್‌ ಸಂಸ್ಥಾನಗಳ (ಯುಎಇ) ನಡುವೆ ಮೊಟ್ಟ ಮೊದಲ ವಾಣಿಜ್ಯ ಉದ್ದೇಶದ ವಿಮಾನ ಹಾರಾಟ ಸೋಮವಾರ ಆರಂಭವಾಯಿತು.

ಇಸ್ರೇಲ್‌ ರಾಜಧಾನಿ ಟೆಲ್‌ ಅವಿವ್‌ನ ಬೆನ್‌ ಗುರಿಯಾನ್‌ ವಿಮಾನನಿಲ್ದಾಣದಿಂದ ಈ ವಿಮಾನ ಅಬು ಧಾಬಿಯತ್ತ ಹಾರಿತು.

ಅಮೆರಿಕ ಮಧ್ಯಸ್ಥಿಕೆಯ ಪರಿಣಾಮ ಉಭಯ ದೇಶಗಳ ನಡುವೆ ಸಂಧಾನ ಯಶಸ್ವಿಯಾಯಿತು. ರಾಜತಾಂತ್ರಿಕ ಸಂಬಂಧಕ್ಕೆ ಚಾಲನೆ ನೀಡುವುದಾಗಿ ಎರಡೂ ದೇಶಗಳು ಆಗಸ್ಟ್‌ 13ರಂದು ಪ್ರಕಟಿಸಿದವು.ಈ ಬೆಳವಣಿಗೆಯ ಬೆನ್ನಲ್ಲೇ ಐತಿಹಾಸಿಕ ವಿಮಾನ ಹಾರಾಟ ಆರಂಭಗೊಂಡಿತು.

ADVERTISEMENT

ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೆರ್‌ ಬೆನ್‌ ಶಬ್ಬತ್‌ ನೇತೃತ್ವದ ತಂಡ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಲಹೆಗಾರ ಮತ್ತು ಅಳಿಯ ಜರೇಡ್‌ ಕುಶ್ನರ್ ನೇತೃತ್ವದ ತಂಡ ಹಾಗೂ ಭದ್ರತಾ ಸಲಹೆಗಾರ ರಾಬರ್ಟ್‌ ಒಬ್ರಿಯಾನ್‌ ಸೇರಿದಂತೆ ಉನ್ನತ ಅಧಿಕಾರಿಗಳು ಈ ವಿಮಾನದಲ್ಲಿ ಪ್ರಯಾಣಿಸಿದರು.

ಈಜಿಪ್ಟ್‌ ಮತ್ತು ಜೋರ್ಡಾನ್‌ ನಂತರ ಇಸ್ರೇಲ್‌ ಜೊತೆ ರಾಜತಾಂತ್ರಿಕ ಸಂಬಂಧ ಹೊಂದಿದ ಮೂರನೇ ಅರಬ್‌ ದೇಶ ಯುಎಇ ಆಗಿದೆ.

ವಿಮಾನ ಟೇಕ್‌ಆಫ್‌ ಆಗುವುದಕ್ಕೂ ಮುನ್ನ ಮಾತನಾಡಿದ ಬೆನ್‌ ಶಬ್ಬತ್‌, ‘ಪ್ರವಾಸೋದ್ಯಮ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉಭಯ ದೇಶಗಳು ಒಟ್ಟಿಗೆ ಕೆಲಸ ಮಾಡಲು ಸಾಧ್ಯವಾಗಲಿದೆ. ಈ ದ್ವಿಪಕ್ಷೀಯ ಸಂಬಂಧವನ್ನು ಮತ್ತೊಂದು ಮಜಲಿಗೆ ಒಯ್ಯಲಾಗುವುದು’ ಎಂದರು.

ಸೌದಿ ಅರೇಬಿಯಾ ಸಹ ತನ್ನ ವಾಯುಪ್ರದೇಶದ ಮೂಲಕ ಇಸ್ರೇಲ್‌ ವಿಮಾನ ಹಾರಾಟ ನಡೆಸಲು ಅನುಮತಿ ನೀಡಿದೆ. ಅದರಲ್ಲೂ, ಅಮೆರಿಕ ಈ ಸಂಬಂಧ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಸೌದಿ ಅರೇಬಿಯಾ ಅನುಮತಿ ನೀಡಿದೆ ಎಂದು ಇಸ್ರೇಲ್‌ನ ಚಾನೆಲ್‌ 12 ಸುದ್ದಿಸಂಸ್ಥೆ ವರದಿ ಮಾಡಿದೆ.

ಟೆಲ್‌ ಅವಿವ್‌ ಮತ್ತು ನವದೆಹಲಿ ನಡುವಿನ ವಿಮಾನ ಸಹ ಸೌದಿ ಅರೇಬಿಯಾ ವಾಯುಪ್ರದೇಶ ಮೂಲಕವೇ ಹಾರಾಟ ನಡೆಸುತ್ತಿದೆ. ಆದರೆ, ಇಸ್ರೇಲ್‌ ಮೂಲದ ವಿಮಾನಗಳ ಹಾರಾಟಕ್ಕೆ ಸೌದಿ ಅರೇಬಿಯಾ ತನ್ನ ವಾಯುಪ್ರದೇಶವನ್ನು ಮುಕ್ತಗೊಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.