ಪ್ಯಾರಿಸ್: ಫ್ರಾನ್ಸ್ ಹಾಗೂ ಜರ್ಮನಿ ದೇಶಗಳಲ್ಲಿ ತಲಾ ಒಂದು 'ಮಂಕಿಪಾಕ್ಸ್' ಪ್ರಕರಣ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ.ಈ ಸೋಂಕು ಸಾಮಾನ್ಯವಾಗಿ ಆಫ್ರಿಕಾ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ರಾಜಧಾನಿ ಪ್ಯಾರಿಸ್ ಅನ್ನೂ ಒಳಗೊಂಡ 'ಐಲೆ–ಡಿ–ಫ್ರಾನ್ಸ್' ಪ್ರದೇಶದಲ್ಲಿ 29 ವರ್ಷದ ವ್ಯಕ್ತಿಯೊಬ್ಬರಲ್ಲಿ'ಮಂಕಿಪಾಕ್ಸ್' ಕಾಣಿಸಿಕೊಂಡಿದೆ. ಅವರು, ಈ ವೈರಸ್ ಹೆಚ್ಚಾಗಿ ಹರಡುತ್ತಿರುವ ರಾಷ್ಟ್ರಗಳಿಂದ ವಾಪಸ್ ಆದವರೇನಲ್ಲ ಎಂದು ಫ್ರಾನ್ಸ್‌ನ ಆರೋಗ್ಯ ಇಲಾಖೆ ಶುಕ್ರವಾರ ಹೇಳಿದೆ.
ಅದೇರೀತಿ, ಜರ್ಮನಿಯಲ್ಲಿಯೂ ಒಂದು ಪ್ರಕರಣ ಪತ್ತೆಯಾಗಿದೆ. ದೇಶದಲ್ಲಿ ಚರ್ಮದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದ ವ್ಯಕ್ತಿಯೊಬ್ಬರಲ್ಲಿ 'ಮಂಕಿಪಾಕ್ಸ್' ಖಚಿತವಾಗಿದೆ ಎಂದುಅಲ್ಲಿನ ಶಸಸ್ತ್ರ ಪಡೆಯ ಮೈಕ್ರೊಬಯಾಲಜಿ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ಇಟಲಿಯಲ್ಲಿ ಮೊದಲ 'ಮಂಕಿಪಾಕ್ಸ್' ಪ್ರಕರಣ ಪತ್ತೆ
ಯುರೋಪಿನ ಹಲವು ದೇಶಗಳಲ್ಲಿ 'ಮಂಕಿಪಾಕ್ಸ್' ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಆಫ್ರಿಕಾ ದೇಶಗಳಿಂದ ಬರುವವರು, ಮುಖ್ಯವಾಗಿ ಸಲಿಂಗಿಗಳು (ಗೇ–ಗಳು), ಸೋಂಕಿನ ಯಾವುದೇ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಜರ್ಮನಿಯ 'ರಾಬರ್ಟ್ ಕೋಚ್ ಇನ್‌ಸ್ಟಿಟ್ಯೂಟ್' ಒತ್ತಾಯಿಸಿದೆ.
ಈ ಅಪರೂಪದ ಕಾಯಿಲೆ ಮಾರಣಾಂತಿಕವೇನಲ್ಲ. ಆದರೆ,ಮೈಮೇಲೆ ಕೆಂಪು ದದ್ದುಗಳು, ಜ್ವರ, ನೆಗಡಿ, ತಲೆನೋವು, ಮೈ–ಕೈ ನೋವು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಸೋಂಕಿತರ ಬಟ್ಟೆ ಬಳಸುವುದರಿಂದ, ಗಾಯದ ರಸ ಸೋಕುವುದರಿಂದಲೂ ಈ ವೈರಸ್ ಹರಡುತ್ತದೆ. ಸಾಮಾನ್ಯವಾಗಿ, ಎರಡರಿಂದ ನಾಲ್ಕು ವಾರಗಳಲ್ಲಿ 'ಮಂಕಿಪಾಕ್ಸ್'ನಿಂದ ಗುಣಮುಖವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹೇಳಿದೆ.
ಅಮೆರಿಕ, ಕೆನಡಾ ಹಾಗೂ ಯುರೋಪಿನ ಇಟಲಿ, ಪೋರ್ಚುಗಲ್, ಸ್ಪೇನ್, ಸ್ವೀಡನ್‌ನಲ್ಲಿಯೂ 'ಮಂಕಿಪಾಕ್ಸ್' ಪ್ರಕರಣಗಳು ವರದಿಯಾಗಿದ್ದವು. ಇದೀಗ ಈ ರಾಷ್ಟ್ರಗಳ ಪಟ್ಟಿಗೆ ಫ್ರಾನ್ಸ್ ಮತ್ತು ಜರ್ಮನಿ ಸೇರ್ಪಡೆಯಾಗಿರುವುದು ಆತಂಕ ಸೃಷ್ಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.