ADVERTISEMENT

ಗರ್ಭಪಾತ ಮಹಿಳೆಯ ಸಾಂವಿಧಾನಿಕ ಹಕ್ಕು: ಮಸೂದೆ ಅಂಗೀಕರಿಸಿದ ಫ್ರಾನ್ಸ್‌

ಏಜೆನ್ಸೀಸ್
Published 5 ಮಾರ್ಚ್ 2024, 2:51 IST
Last Updated 5 ಮಾರ್ಚ್ 2024, 2:51 IST
   

ಪ್ಯಾರಿಸ್‌: ಗರ್ಭಪಾತ ಮಹಿಳೆಯರ ಸಾಂವಿಧಾನಿಕ ಹಕ್ಕು ಎಂದು ಪ್ರತಿಪಾದಿಸಿರುವ ಫ್ರೆಂಚ್‌ ಶಾಸಕಾಂಗ, ಸೋಮವಾರ ನಡೆದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಸಂವಿಧಾನದ 34ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ಮಸೂದೆಯೊಂದನ್ನು ಅಂಗೀಕರಿಸಿದೆ.

ಮಸೂದೆ ಪರ ಸದನದಲ್ಲಿ ಶೇ.85ರಷ್ಟು ಬೆಂಬಲ ವ್ಯಕ್ತವಾಗಿದ್ದು, ಮಸೂದೆ ಪರ 780, ವಿರುದ್ಧ 72 ಮತ ಚಲಾವಣೆಗೊಂಡವು. ಮಸೂದೆ ಅಂಗೀಕಾರವಾಗುತ್ತಕೇ ಇಡೀ ಸದನದಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಈ ಕುರಿತು ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ‘ಗರ್ಭಪಾತದ ಬಗ್ಗೆ ನಿರ್ಧರಿಸಲು ಹೊಸ ತಿದ್ದುಪಡಿಯು ಮಹಿಳೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತದೆ’ ಎಂದರು.

ADVERTISEMENT

‘ಎಲ್ಲಾ ಮಹಿಳೆಯರಿಗೆ ನಾವು ಈ ಮೂಲಕ ಒಂದು ಸಂದೇಶವನ್ನು ಕಳುಹಿಸುತ್ತಿದ್ದೇವೆ. ನಿಮ್ಮ ದೇಹವು ನಿಮಗೆ ಸೇರಿದ್ದು, ಅದನ್ನು ನಿಯಂತ್ರಿಸುವ ಹಕ್ಕು ಯಾರಿಗೂ ಇಲ್ಲ’ ಎಂದು ಪ್ರಧಾನಿ ಗೇಬ್ರಿಯಲ್ ಅಟಲ್ ಹೇಳಿದರು.

ಈ ವೇಳೆ ಗರ್ಭಪಾತದ ಹಕ್ಕುಗಳಿಗಾಗಿ ಹೋರಾಡಿದ ಎಲ್ಲ ಮಹಿಳೆಯರಿಗೆ ಗೌರವ ಸಲ್ಲಿಸಲಾಯಿತು.

2022ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್‌ ಗರ್ಭಪಾತದ ಹಕ್ಕನ್ನು ತೆಗೆದುಹಾಕಿದ್ದು, ಇದಾದ ಬಳಿಕ ಫ್ರಾನ್ಸ್‌ನಲ್ಲಿ ಗರ್ಭಪಾತದ ಹಕ್ಕುಗಳ ಸಾಂವಿಧಾನಿಕ ಪರಿಶೀಲನೆಯ ಕುರಿತು ಚರ್ಚೆಗಳು ಪ್ರಾರಂಭವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.