ಫ್ರಾನ್ಸ್ ಪ್ರಧಾನಿ ಮಿಷೆಲ್ ಬರ್ನಿಯರ್
ಪ್ಯಾರಿಸ್: ಫ್ರಾನ್ಸ್ ಪ್ರಧಾನಿ ಮಿಷೆಲ್ ಬರ್ನಿಯರ್ ವಿರುದ್ಧ ಬುಧವಾರ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದ್ದು, ಅವರು ಅಧಿಕಾರದಿಂದ ಪದಚ್ಯುತಗೊಂಡಿದ್ದಾರೆ.
1962ರ ಬಳಿಕ ಇದೇ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯಕ್ಕೆ ಯಶಸ್ಸು ದೊರೆತಿದೆ. ಫ್ರಾನ್ಸ್ ಸಂಸತ್ತಿನ ಬಲಪಂಥೀಯ ಮತ್ತು ಎಡಪಂಥೀಯ ಸದಸ್ಯರು ಒಗ್ಗೂಡಿ ನಿರ್ಣಯದ ಪರ ಮತ ಚಲಾಯಿಸಿದರು.
ಅವಿಶ್ವಾಸ ನಿರ್ಣಯಕ್ಕೆ ಗೆಲುವಾದ ಹಿಂದೆಯೇ ಬರ್ನಿಯರ್ ಮತ್ತು ಅವರ ಸಂಪುಟ ಸದಸ್ಯರು ರಾಜೀನಾಮೆ ಸಲ್ಲಿಸಿದರು. ನಿರ್ಣಯದ ಪರ 331 ಮತಗಳು ಬಂದವು. ಅಂಗೀಕಾರಕ್ಕೆ ಒಟ್ಟು 288 ಮತಗಳ ಅಗತ್ಯವಿತ್ತು.
ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿಯಾಗಿ ನೇಮಕವಾಗಿದ್ದ ಬರ್ನಿಯರ್ ಅವರು ಇತ್ತೀಚಿನ ವರ್ಷಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅಧಿಕಾರದಲ್ಲಿದ್ದ ಪ್ರಧಾನಿ ಎಂದು ಇತಿಹಾಸದಲ್ಲಿ ದಾಖಲಾದರು.
‘ಈ ಅವಿಶ್ವಾಸ ನಿರ್ಣಯ ಎಲ್ಲವನ್ನೂ ಗಂಭೀರಗೊಳಿಸಲಿದೆ. ಪರಿಸ್ಥಿತಿಯನ್ನು ಮತ್ತಷ್ಟು ಕ್ಲಿಷ್ಟಕರವಾಗಿಸಲಿದೆ’ ಎಂದು ಅವರು ವಿದಾಯ ಭಾಷಣದಲ್ಲಿ ಹೇಳಿದರು.
ಫ್ರಾನ್ಸ್‌ನ ನ್ಯಾಷನಲ್ ಅಸೆಂಬ್ಲಿಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆದಿಲ್ಲ. ಪ್ರಸ್ತುತ ಮೂರು ಮೈತ್ರಿಕೂಟಗಳಿವೆ. ಸರ್ಕಾರದ ಪತನದ ಹಿಂದೆಯೇ ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಯೂ ಮೂಡಿದೆ.
ಬರ್ನಿಯರ್ ರಾಜೀನಾಮೆ ನೀಡಿರುವುದನ್ನು ಅಧ್ಯಕ್ಷರ ಕಚೇರಿ ದೃಢಪಡಿಸಿದೆ. ಹೊಸ ಸರ್ಕಾರ ರಚನೆ ಆಗುವವವರೆಗೂ ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿಯಬೇಕು ಎಂದು ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.