ADVERTISEMENT

ಗಾಲ್ವನ್ ಕಣಿವೆ ಸಂಘರ್ಷ ಚೀನಾದ ಭೂ ವಿಸ್ತರಣೆಯ ಭಾಗ: ಅಮೆರಿಕ ವರದಿ

ಏಜೆನ್ಸೀಸ್
Published 18 ಜುಲೈ 2020, 4:23 IST
Last Updated 18 ಜುಲೈ 2020, 4:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ನಡೆದಿದ್ದ ಸಂಘರ್ಷ ದಕ್ಷಿಣ ಏಷ್ಯಾದಲ್ಲಿ ಚೀನಾದ ಭೂಪ್ರದೇಶ ವಿಸ್ತರಣೆಯ ಭಾಗ ಎಂದು ‘ಯುಎಸ್ ನ್ಯೂಸ್’ ಮತ್ತು ‘ವರ್ಲ್ಡ್ ರಿಪೋರ್ಟ್’ ಸುದ್ದಿ ತಾಣಗಳಿಗೆ ದೊರೆತಿರುವ ದಾಖಲೆಗಳಿಂದ ತಿಳಿದುಬಂದಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಗಾಲ್ವನ್ ಕಣಿವೆ ಸಂಘರ್ಷ ಚೀನಾದ ವ್ಯಾಪಕ ಸಾಮ್ರಾಜ್ಯಶಾಹಿ ಧೋರಣೆಯ ಭಾಗ. ಚೀನಾದ ವಿಸ್ತರಣಾವಾದವು ಸೇನಾ ಆಕ್ರಮಣ ಉದ್ದೇಶಪೂರ್ವಕವಲ್ಲ ಎಂಬಂತೆ ಬಿಂಬಿಸುವುದರ ಜತೆಗೆ, ಇತರ ದೇಶಗಳ ಆರ್ಥಿಕತೆಯನ್ನು ಹಾಗೂ ಸಾರ್ವಭೌಮತ್ವವನ್ನು ಬಲವಂತದ ರಾಜತಾಂತ್ರಿಕತೆ ಮೂಲಕ ದುರ್ಬಲಗೊಳಿಸುವ ಧೋರಣೆ ಹೊಂದಿದೆ ಎಂದು ಭಾರತವು ಭಾವಿಸಿರುವುದಾಗಿ ದಾಖಲೆಗಳನ್ನು ಉಲ್ಲೇಖಿಸಿ ‘ಯುಎಸ್‌ ನ್ಯೂಸ್‌’ನ ರಾಷ್ಟ್ರೀಯ ಭದ್ರತಾ ಕರೆಸ್ಪಾಂಡೆಂಟ್ ಪಾಲ್ ಡಿ ಶಿಂಕ್ಮನ್ ವರದಿ ಮಾಡಿದ್ದಾರೆ. ಈ ದಾಖಲೆಗಳನ್ನು ಕೆಲವು ವಿಶ್ಲೇಷಕರು ಬೆಂಬಲಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕದಿಂದ ವಿಶ್ವದಾದ್ಯಂತ ಉಂಟಾಗಿರುವ ಸಂದಿಗ್ಧ ಪರಿಸ್ಥಿತಿಯನ್ನು ಚೀನಾವು ದಕ್ಷಿಣ ಚೀನಾ ಸಮುದ್ರ ಮತ್ತು ಹಾಂಕಾಂಗ್ ಸೇರಿದಂತೆ ಇತರ ಪ್ರದೇಶಗಳಲ್ಲಿ ಹಕ್ಕುಗಳನ್ನು ವಿಸ್ತರಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ ಎಂಬ ಅಮೆರಿಕದ ಆತಂಕದ ನಡುವೆಯೇ ಈ ವರದಿ ಪ್ರಕಟವಾಗಿದೆ.

ADVERTISEMENT

ಇತ್ತೀಚಿನ ಸಂಘರ್ಷದೊಂದಿಗೆ ಚೀನಾವು ತನ್ನ ನೈಋತ್ಯ ಗಡಿಪ್ರದೇಶದ ಪರ್ವತ ಪ್ರದೇಶಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ವಾಸ್ತವ ಸ್ಥಿತಿಯನ್ನು ಬದಲಾಯಿಸಲು ಯತ್ನಿಸುತ್ತಿದೆ. ಆ ಮೂಲಕ ತನ್ನ ಪಾಲುದಾರ ಪಾಕಿಸ್ತಾನದ ಜೊತೆ ನೇರ ಸಂಪರ್ಕವನ್ನು ಹೊಂದಲು ಮುಂದಾಗುತ್ತಿದೆ. ಪಾಕಿಸ್ತಾನದಲ್ಲಿ ತಾನು ಹಮ್ಮಿಕೊಂಡಿರುವ ಯೋಜನೆಗಳ ಜಾರಿಗೆ ನೇರ ಹಾದಿ ಕಂಡುಕೊಳ್ಳಲು ನಿರ್ದಿಷ್ಟ ಗಡಿ ಪ್ರದೇಶಗಳಿಂದ ಭಾರತೀಯ ಸೈನಿಕರನ್ನು ಉಚ್ಚಾಟಿಸಲು ಚೀನಾ ಯತ್ನಿಸುತ್ತಿದೆ ಎಂದು ಭಾರತ ಭಾವಿಸಿರುವುದಾಗಿಯೂ ಶಿಂಕ್ಮನ್ ಉಲ್ಲೇಖಿಸಿದ್ದಾರೆ.

ಗಾಲ್ವನ್‌ ಕಣಿವೆಯಲ್ಲಿ ನಡೆದಿದ್ದ ಸಂಘರ್ಷದಲ್ಲಿ ಭಾರತದ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದರು. ಚೀನಾ ಈವರೆಗೂ ಸಾವು–ನೋವುಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.