ADVERTISEMENT

ಘಜ್ನಿ ಪ್ರಾಂತ್ಯ ತಾಲಿಬಾನ್‌ ವಶ

ಕಾಬೂಲ್‌ ವಶಪಡಿಸಿಕೊಳ್ಳಲು ಉಗ್ರರ ಯತ್ನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 18:51 IST
Last Updated 12 ಆಗಸ್ಟ್ 2021, 18:51 IST
ಅಪ್ಗಾನಿಸ್ತಾನದಲ್ಲಿ ಹೊಸದಾಗಿ ವಶಕ್ಕೆಪಡೆದ ನಂತರ ಘಜ್ನಿ ನಗರದಲ್ಲಿ ತಾಲಿಬಾನಿಗಳು ಬೀಡುಬಿಟ್ಟಿರುವುದು ಎಎಫ್‌ಪಿ ಚಿತ್ರ
ಅಪ್ಗಾನಿಸ್ತಾನದಲ್ಲಿ ಹೊಸದಾಗಿ ವಶಕ್ಕೆಪಡೆದ ನಂತರ ಘಜ್ನಿ ನಗರದಲ್ಲಿ ತಾಲಿಬಾನಿಗಳು ಬೀಡುಬಿಟ್ಟಿರುವುದು ಎಎಫ್‌ಪಿ ಚಿತ್ರ   

ಕಾಬೂಲ್‌ (ಎಪಿ): ಅಫ್ಗಾನಿಸ್ತಾನ ನೆಲದಿಂದ ಸೇನೆಗಳನ್ನು ಹಿಂಪಡೆಯಲು ಅಮೆರಿಕ ಮತ್ತು ನ್ಯಾಟೊ ಸಿದ್ಧತೆ ನಡೆಸಿರುವಂತೆಯೇ ಇತ್ತ ಅತಿಕ್ರಮಣ ಮುಂದುವರಿಸಿರುವ ತಾಲಿಬಾನ್, ಘಜ್ನಿ ಪ್ರಾಂತ್ಯವನ್ನು ತನ್ನ ವಶಕ್ಕೆ ಪಡೆದಿದೆ.

ಕಾಬೂಲ್‌ನ ನೈರುತ್ಯದಲ್ಲಿ 130 ಕಿ.ಮೀ.ದೂರದಲ್ಲಿರುವ ಘಜ್ನಿ, ತಾಲಿಬಾನ್‌ ವಶಕ್ಕೆ ಪಡೆದಿರುವ 10ನೇ ಪ್ರಾಂತ್ಯ. ಘಜ್ನಿ ಹೊರವಲಯದಲ್ಲಿ ಗುಪ್ತದಳ, ಸೇನಾನೆಲೆಯ ಆಸುಪಾಸಿನಲ್ಲಿ ಸಂಘರ್ಷ ಮುಂದುವರಿದಿದೆ ಎಂದೂ ವರದಿ ತಿಳಿಸಿದೆ.

ಘಜ್ನಿ ಪ್ರಾಂತ್ಯದ ಇದೇ ಹೆಸರಿನ ರಾಜಧಾನಿಯಲ್ಲಿ ತಾಲಿಬಾನಿಗಳು ಇರುವ ಚಿತ್ರ, ವಿಡಿಯೊಗಳನ್ನು ತಾಲಿಬಾನ್‌ ಪ್ರಕಟಿಸಿದೆ. ಅಪ್ಗಾನಿಸ್ತಾನ ಭದ್ರತಾ ಪಡೆ ಮತ್ತು ಸರ್ಕಾರ ಈ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

ADVERTISEMENT

ಅಧ್ಯಕ್ಷ ಅಷ್ರಫ್‌ ಘನಿ ಅವರು ದೇಶದ ಭದ್ರತಾ ಪಡೆ ಮತ್ತು ಸೇನೆ ಮತ್ತು ಅಮೆರಿಕದ ವಾಯುಪಡೆ ಬಲವನ್ನು ನಂಬಿದ್ದು, ಪ್ತತಿದಾಳಿ ನಡೆಸಲು ಯತ್ನ ಮುಂದುವರಿಸಿದ್ದಾರೆ. ಕಾಬೂಲ್‌ಗೆ ಸದ್ಯ ಅತಿಕ್ರಮಣದ ಭೀತಿ ಇಲ್ಲವಾದರೂ ಆ ನಿಟ್ಟಿನಲ್ಲಿ ತಾಲಿಬಾನ್ ವೇಗವಾಗಿ ಮುನ್ನಡೆದಿದೆ. ಅಫ್ಗಾನಿಸ್ತಾನ ಎಷ್ಟು ಕಾಲ ಇದಕ್ಕೆ ಪ್ರತಿರೋಧ ಒಡ್ಡಲಿದೆ ಎಂಬ ಪ್ರಶ್ನೆ ಉಳಿದಿದೆ.

ತಾಲಿಬಾನ್‌ನ ಅತಿಕ್ರಮಣ ದಾಳಿಯ ಹಿಂದೆಯೇ ಅನೇಕ ನಿವಾಸಿಗಳು ವಿವಿಧೆಡೆಯಿಂದ ಸ್ಥಳಾಂತರಗೊಂಡಿದ್ದಾರೆ. ಈ ಮಧ್ಯೆ, ರಾಜಧಾನಿ ರಕ್ಷಿಸುವ ಉದ್ದೇಶದಿಂದ ವಿವಿಧೆಡೆ ಇರುವ ಸೇನೆ, ಭದ್ರತಾ ಪಡೆಯನ್ನು ಕರೆಸಿಕೊಳ್ಳುವ ಸಂಭವವಿದೆ.

ಘಜ್ನಿ ನಗರ ಅತಿಕ್ರಮಣಗೊಳ್ಳುವ ಹಾದಿಯಲ್ಲಿದೆ ಎಂದು ಅಲ್ಲಿನ ಜನಪ್ರತಿನಿಧಿಗಳಾಧ ಮೊಹಮ್ಮದ್‌ ಅರಿಫ್‌ ರೆಹಮಾನಿ, ಅಮಾನುಲ್ಲಾ ಕಮ್ರಾನಿ ಹೇಳಿದ್ದಾರೆ. ‘ಘಜ್ನಿಯು ಮಸೀದಿಯೊಂದರ ಬಳಿ ತಮ್ಮ ರೈಫಲ್‌ಗಳನ್ನು ತೋರಿಸುತ್ತಾ ‘ದೇವರು ದೊಡ್ಡವನು’ ಎಂದು ತಾಲಿಬಾನಿಗಳು ಉದ್ಗರಿಸಿದ್ದಾರೆ. ಒಬ್ಬ ಉಗ್ರ ರಾಕೆಟ್‌ ಜೋಡಿಸಿದ್ದ ಉಡಾವಣಾ ವಾಹಕವನ್ನು ಹಿಡಿದಿದ್ದ’ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.