ADVERTISEMENT

ನಾನೇ 'ಗೋಲ್ಡನ್‍ ಸ್ಟೇಟ್ ಕಿಲ್ಲರ್': ಆರೋಪಿ ತಪ್ಪೊಪ್ಪಿಗೆ

ರಾಯಿಟರ್ಸ್
Published 30 ಜೂನ್ 2020, 8:03 IST
Last Updated 30 ಜೂನ್ 2020, 8:03 IST
ಆರೋಪಿ–ಪ್ರಾತಿನಿಧಿಕ ಚಿತ್ರ
ಆರೋಪಿ–ಪ್ರಾತಿನಿಧಿಕ ಚಿತ್ರ   

ಸಾಕ್ರಾಮೆಂಟೊ, ಕ್ಯಾಲಿಫ್‍:ಕ್ಯಾಲಿಫೋರ್ನಿಯಾದಲ್ಲಿ 1970 ಮತ್ತು 1980ರ ದಶಕದಲ್ಲಿ ನಡೆದಿದ್ದ13 ಸರಣಿ ಹತ್ಯೆಗಳು ಹಾಗೂ 12ಕ್ಕೂ ಹೆಚ್ಚು ಅತ್ಯಾಚಾರ ಕೃತ್ಯಗಳನ್ನು ತಾನೇ ನಡೆಸಿದ್ದಾಗಿ ಮಾಜಿ ಪೊಲೀಸ್‍ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. ಆ ದಶಕದಲ್ಲಿ ಕ್ಯಾಲಿಫೋರ್ನಿಯಾವನ್ನು ಕಾಡಿದ್ದ ವ್ಯಕ್ತಿಯನ್ನು ‘ಗೋಲ್ಡನ್‌ ಸ್ಟೇಟ್‌ ಕಿಲ್ಲರ್‌’ ಎಂದೇ ಕರೆಯಲಾಗುತ್ತಿತ್ತು.

ಹೀಗೆ ತಪ್ಪನ್ನು ಒಪ್ಪಿಕೊಂಡ ಮಾಜಿ ಪೊಲೀಸ್‌ ಅಧಿಕಾರಿ ಜೋಸೆಫ್‍ ಜೇಮ್ಸ್ ಡಿ ಆಂಜೆಲಿಯೊ (74). ಶಿಕ್ಷೆಯ ಪ್ರಮಾಣ ಕಡಿಮೆ ಆಗುವ ರಾಜಿಗೆ ಅನುಗುಣವಾಗಿ ಆತ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಅದನ್ನು ಸೋಮವಾರ ನ್ಯಾಯಾಲಯ ಮಾನ್ಯ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆತನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಅವಧಿಯಲ್ಲಿ ಪರೋಲ್‌ಗೆ ಅವಕಾಶ ದೊರೆತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸಂತ್ರಸ್ತರು ಹಾಗೂ ಅವರ ವಯೋವೃದ್ಧ ಸಂಬಂಧಿಗಳು ಜೀವಂತ ಇರುವಾಗಲೇ ಪ್ರಕರಣವನ್ನು ಇತ್ಯರ್ಥಗೊಳಿಸುವ ಕ್ರಮವಾಗಿ ರಾಜಿಗೆ ಬರಲಾಯಿತು. ಈ ಕ್ರಮದಿಂದ ಇನ್ನು ಅಂದಾಜು 10 ವರ್ಷ ವಿಚಾರಣೆ ನಡೆಯುವುದು ತಪ್ಪಿದೆ ಎಂದು ಮೂಲಗಳು ತಿಳಿಸಿವೆ.

‘ಈಗ ನಮ್ಮೆದುರೇ ನ್ಯಾಯ ದೊರೆತಂತಾಗಿದೆ’ ಎಂದು ಸಾಕ್ರಾಮೆಂಟೊದ ಉಪ ಜಿಲ್ಲಾ ಅಟಾರ್ನಿ ಅಮಿ ಹಾಲಿಡೇ ಪ್ರತಿಕ್ರಿಯಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಪಾಡಲು ಕೋರ್ಟ್ ಬದಲು ವಿಶ್ವವಿದ್ಯಾಲಯದ ಕೊಠಡಿಯಲ್ಲಿ ವಿಚಾರಣೆ ನಡೆಯಿತು. ಎಲ್ಲರೂ ಮಾಸ್ಕ್‌ ಸೇರಿದಂತೆ ಸುರಕ್ಷಾ ಪರಿಕರಗಳನ್ನು ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.