ADVERTISEMENT

Shot in Washington: 19 ದೇಶಗಳ ಜನರ 'Green Card' ಪರಿಶೀಲನೆಗೆ ಟ್ರಂಪ್‌ ಸೂಚನೆ

ಏಜೆನ್ಸೀಸ್
Published 28 ನವೆಂಬರ್ 2025, 8:29 IST
Last Updated 28 ನವೆಂಬರ್ 2025, 8:29 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್: ಶ್ವೇತಭವನದಿಂದ ತುಸು ದೂರದಲ್ಲೇ ಸೈನಿಕರಿಬ್ಬರ ಮೇಲೆ ಬುಧವಾರ ಮಧ್ಯಾಹ್ನ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಒಬ್ಬ ಸೈನಿಕ (ಸಾರಾ ಬೆಕ್‌ಸ್ಟ್ರೋಮ್) ಮೃತಪಟ್ಟಿದ್ದಾರೆ. ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಈ ಬೆಳವಣಿಗೆಗಳ ನಡುವೆ 19 ದೇಶಗಳ ಜನರ ಗ್ರೀನ್ ಕಾರ್ಡ್‌ಗಳನ್ನು ಪರಿಶೀಲಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.

ಅಮೆರಿಕದ ಜನರ ಭದ್ರತೆ ಅತ್ಯಂತ ಮುಖ್ಯ. ಹಿಂದಿನ ಆಡಳಿತದ ಅಜಾಗರೂಕ ನೀತಿಗಳಿಗೆ ಅಮೆರಿಕದ ಜನ ಬೆಲೆ ತೆರುವುದಿಲ್ಲ. ಟ್ರಂಪ್ ಅವರ ಸೂಚನೆಯಂತೆ ವಿದೇಶಿಯರಿಗೆ ನೀಡಿದ ಗ್ರೀನ್ ಕಾರ್ಡ್‌ ಅನ್ನು ಮರುಪರಿಶೀಲನೆ ನಡೆಸಲಾಗುವುದು ಎಂದು ಯುಎಸ್‌ಸಿಐಎಸ್ ನಿರ್ದೇಶಕ ಜೋಸೆಫ್ ಎಡ್ಲೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

19 ದೇಶಗಳ ಪಟ್ಟಿ ಇಲ್ಲಿದೆ ..

  • ಅಫ್ಗಾನಿಸ್ತಾನ

    ADVERTISEMENT
  • ಬರ್ಮಾ

  • ಚಾಡ್

  • ಕಾಂಗೋ ಗಣರಾಜ್ಯ

  • ಈಕ್ವಟೋರಿಯಲ್ ಗಿನಿ

  • ಏರಿಟ್ರಿಯಾ

  • ಹೈಟಿ

  • ಇರಾನ್

  • ಲಿಬಿಯಾ

  • ಸೊಮಾಲಿಯಾ

  • ಸುಡಾನ್

  • ಯೆಮನ್

  • ಬುರುಂಡಿ

  • ಕ್ಯೂಬಾ

  • ಲಾವೋಸ್

  • ಸಿಯೆರಾ ಲಿಯೋನ್

  • ಟೋಗೊ

  • ತುರ್ಕಮೆನಿಸ್ತಾನ್

  • ವೆನೆಜುವೆಲಾ

ತೃತೀಯ ಜಗತ್ತಿನ ದೇಶಗಳ ಜನರ ವಲಸೆಯನ್ನು ಶಾಶ್ವತವಾಗಿ ನಿಲ್ಲಿಸಲು ತಮ್ಮ ಆಡಳಿತ ಕೆಲಸ ಮಾಡುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಟ್ರುಥ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ದೇಶದಲ್ಲಿ ಶಾಂತಿಯನ್ನು ಕದಡಿಸುವ ಯಾವುದೇ ವಿದೇಶಿ ಪ್ರಜೆಯನ್ನು ಗಡೀಪಾರು ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಶ್ವೇತ ಭವನದಿಂದ ತುಸು ದೂರದಲ್ಲೇ ಸೈನಿಕರಿಬ್ಬರ ಮೇಲೆ ಬುಧವಾರ ಮಧ್ಯಾಹ್ನ ಗುಂಡಿನ ದಾಳಿ ನಡೆದಿದ್ದು, ಮೇಯರ್ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಶಂಕಿತ ಆರೋಪಿ ಅಫ್ಗನ್ ಪ್ರಜೆ ರಹಮಾನುಲ್ಲಾ ಲಕನ್ವಾಲ್‌ನನ್ನು (29) ಬಂಧಿಸಲಾಗಿದೆ. ಆತ 2021ರಲ್ಲಿ ಆಪರೇಷನ್ ಅಲೈಸ್ ವೆಲ್ಕಮ್ ಅಡಿಯಲ್ಲಿ ಅಮೆರಿಕಕ್ಕೆ ಬಂದು ವಾಷಿಂಗ್ಟನ್‌ನ ಬೆಲ್ಲಿಂಗ್‌ಹ್ಯಾಮ್‌ನಲ್ಲಿ ನೆಲೆಸಿದ್ದ.

ದಾಳಿಯನ್ನು ಖಂಡಿಸಿದ್ದ ಟ್ರಂಪ್, ಬೈಡನ್ ಆಡಳಿತದಲ್ಲಿ ಅಮೆರಿಕ ಪ್ರವೇಶಿಸಿದ ಅಫ್ಗನ್ ನಿರಾಶ್ರಿತರನ್ನು ಮರು ತನಿಖೆಗೆ ಒಳಪಡಿಸಬೇಕು ಎಂದಿದ್ದರು.

ಏನಿದು ಗ್ರೀನ್ ಕಾರ್ಡ್

ಪರಿಣಿತ ಉದ್ಯೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಅಮೆರಿಕದಲ್ಲಿ ಕಾಯಂ ಆಗಿ ನೆಲೆಸಲು ‘ಗ್ರೀನ್ ಕಾರ್ಡ್’ ನೀಡಲಾಗುತ್ತದೆ. ಉದ್ಯೋಗ ಆಧಾರಿತ 1.40 ಲಕ್ಷ ಗ್ರೀನ್‌ ಕಾರ್ಡ್‌ಗಳನ್ನು ಅಮೆರಿಕ ಪ್ರತಿ ವರ್ಷ ನೀಡುತ್ತದೆ. ಅಮೆರಿಕದಲ್ಲಿ ಈಗಾಗಲೇ ಉದ್ಯೋಗದಲ್ಲಿರುವ ನೌಕರರು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರು.

ವೃತ್ತಿ ಆಧಾರಿತ ಇನ್ನಷ್ಟು ವೀಸಾಗಳನ್ನು ಅಮೆರಿಕ ನೀಡುತ್ತದೆ. ವಾಣಿಜ್ಯ ವೃತ್ತಿಪರರು, ಶೈಕ್ಷಣಿಕ ಹಾಗೂ ಸಂಶೋಧನೆ, ವಿಜ್ಞಾನ, ಕಲೆಯಲ್ಲಿ ಅಪಾರ ಪರಿಣಿತಿ ಪಡೆದಿರುವವರಿಗೆ ಮೊದಲ ಪ್ರಾಶಸ್ತ್ಯದ ಇಬಿ–1 ವೀಸಾ ನೀಡಲಾಗುತ್ತದೆ. ಕನಿಷ್ಠ 10 ವರ್ಷಗಳ ಅನುಭವ ಇರುವ ವೃತ್ತಿಪರರಿಗೆ ಎರಡನೇ ಪ್ರಾಶಸ್ತ್ಯದ ಇಬಿ–2 ವೀಸಾ ಇದೆ. ಅಮೆರಿಕದ ಕಂಪನಿಯೊಂದಕ್ಕೆ ತಾತ್ಕಾಲಿಕವಾಗಿ ಅಗತ್ಯವಿರುವ ಕಾರ್ಮಿಕರ ನೇಮಕಕ್ಕೆ ಇಬಿ–3 ವೀಸಾ ಮೀಸಲಾಗಿದೆ. ಹಾಗೆಯೇ ಉದ್ಯೋಗ ಅಧಾರಿತವಾದ ಇಬಿ–4 ಮತ್ತು ಇಬಿ–5 ಎಂಬ ವೀಸಾಗಳನ್ನೂ ಅಮೆರಿಕ ಪರಿಚಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.