ADVERTISEMENT

H1B VISA | 2026ರಿಂದ ಕುಟುಂಬದ ಜತೆ ಅಗ್ಗದ ನೌಕರರ US ಪ್ರವೇಶ ಇಳಿಕೆ: ಲುಟ್ನಿಕ್

ಪಿಟಿಐ
Published 30 ಸೆಪ್ಟೆಂಬರ್ 2025, 5:22 IST
Last Updated 30 ಸೆಪ್ಟೆಂಬರ್ 2025, 5:22 IST
<div class="paragraphs"><p>ಹೂವಾರ್ಡ್ ಲುಟ್ನಿಕ್</p></div>

ಹೂವಾರ್ಡ್ ಲುಟ್ನಿಕ್

   

ಪಿಟಿಐ ಚಿತ್ರ

ನ್ಯೂಯಾರ್ಕ್‌: ‘ಅಗ್ಗದ ನೌಕರರು ಅಮೆರಿಕ ಪ್ರವೇಶಿಸುವುದು ಮತ್ತು ಅವರ ಕುಟುಂಬದವರನ್ನು ಕರೆತರುವುದು 2026ರ ಫೆಬ್ರುವರಿಯಿಂದ ತಗ್ಗಲಿದೆ. ಪರಿಷ್ಕೃತ 1 ಲಕ್ಷ ಅಮೆರಿಕನ್ ಡಾಲರ್‌ ಶುಲ್ಕದೊಂದಿಗೆ ಜಾರಿಗೆ ಬರುತ್ತಿರುವ H1B ವೀಸಾದಿಂದ ದೇಶದಲ್ಲಿ ಗಮನಾರ್ಹ ಬದಲಾವಣೆಗಾಳಗಲಿವೆ’ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್ ಲುಟ್ನಿಕ್ ಹೇಳಿದ್ದಾರೆ.

ADVERTISEMENT

ಎಚ್‌1ಬಿ ವೀಸಾಗಳ ಮೇಲೆ ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರವು 1 ಲಕ್ಷ ಅಮೆರಿಕನ್ ಡಾಲರ್ ಶುಲ್ಕವನ್ನು ಸೆಪ್ಟೆಂಬರ್‌ನಲ್ಲಿ ಘೋಷಿಸಿತು. ಇದು ಅಮೆರಿಕದಲ್ಲಿ ಕೆಲಸ ಮಾಡಬಯಸುವ ಭಾರತೀಯ ವೃತ್ತಿಪರರ ಮೇಲೆ ಪರಿಣಾಮ ಬೀರಲಿದೆ ಎಂದೇ ಅಂದಾಜಿಸಲಾಗುತ್ತಿದೆ.

ಎಚ್‌1ಬಿ ವೀಸಾದ ಪರಿಷ್ಕೃತ ಶುಲ್ಕ ಆದೇಶಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಓವಲ್ ಕಚೇರಿಯಲ್ಲಿ ಟ್ರಂಪ್ ಅವರ ಹಿಂದೆ ನಿಂತಿದ್ದ ಲುಟ್ನಿಕ್‌, ಈ ಭಾರೀ ಶುಲ್ಕದ ಅವಶ್ಯಕತೆ ಏನೆಂದು ವಿವರಿಸಿದ್ದರು. ಜತೆಗೆ ಒಂದು ಬಾರಿ ಪಾವತಿಗೆ ಅನ್ವಯಿಸುವಂತೆ ಇದು ಹೊಸ ಅರ್ಜಿಗಳಿಗೆ ಮಾತ್ರ ಅನ್ವಯ ಎಂದೂ ತಿಳಿಸಿದ್ದರು.

‘ಅಮೆರಿಕವು ಹೆಚ್ಚು ಜನರಿಂದ ತುಂಬಿ ತುಳುಕಬಾರದು. ಹೀಗಾಗಿ ಜಾರಿಗೆ ತಂದಿರುವ ಈ ಶುಲ್ಕ ಹೆಚ್ಚಳದಿಂದ ದೇಶದಲ್ಲಿ ಗಮನಾರ್ಹ ಬದಲಾವಣೆ ನೋಡಲಿದ್ದೀರಿ. ವೀಸಾ ಲಾಟರಿ ಪಡೆಯುವುದು ಹೇಗೆ? ಅದು ಲಾಟರಿಯೇ ಆಗಬೇಕೇ? ಹೀಗೆ ಫೆಬ್ರುವರಿ ವೇಳೆಗೆ ಆ ಗೊಂದಲಗಳೆಲ್ಲವೂ ಬಗೆಹರಿಯಲಿವೆ’ ಎಂದಿದ್ದಾರೆ.

1990ರಲ್ಲಿ ಕಾರ್ಯಾಚರಣೆಗೆ ಬಂದ ಎಚ್1ಬಿ ವೀಸಾ, ಈವರೆಗೂ ದುರ್ಬಳಕೆ ಆಗಿದ್ದೇ ಹೆಚ್ಚು. ಕಂಪನಿಗಳು 7ರಿಂದ 10 ಬಾರಿ ವೀಸಾವನ್ನು ಅಗತ್ಯಕ್ಕಿಂತ ಹೆಚ್ಚು ಬಾರಿ ಬಳಸಿಕೊಂಡಿವೆ. ಅದರಲ್ಲೂ ಶೇ 74ರಷ್ಟು ಪಾಲು ಟೆಕ್‌ ಕಂಪನಿಗಳದ್ದೇ ಆಗಿದೆ. ಹಾಗಿದ್ದರೆ ಎಚ್‌1ಬಿ ವೀಸಾ ತಂತ್ರಜ್ಞರಿಗೆ ಮಾತ್ರವೇ? ತಂತ್ರಜ್ಞಾನ ಸಲಹೆಗಾರರು ಸಮುದ್ರದಾಚೆಗಿಂತ, ಸಮುದ್ರದೀಚೆ ಇರುವುದೇ ಮುಖ್ಯ. ವೀಸಾ ಪಡೆಯುವವರೆಲ್ಲರೂ ಇತರ ದೇಶಗಳಿಗೆ ಸೇರಿದವರಾಗಿದ್ದಾರೆ. ಆದರೆ ಈ ವೀಸಾ ಪಡೆಯುವವರಲ್ಲಿ ಶಿಕ್ಷಣ ತಜ್ಞರು ಮತ್ತು ವೈದ್ಯರ ಸಂಖ್ಯೆ ಶೇ 4ರಷ್ಟು ಮಾತ್ರ’ ಎಂದು ಲುಟ್ನಿಕ್ ಹೇಳಿದ್ದಾರೆ.

’ಈ ಎಲ್ಲಾ ಕಾರಣಗಳಿಂದ ಎಚ್‌1ಬಿ ಲಾಟರಿಯಲ್ಲಿನ ಕೆಲ ಸಂಗತಿಗಳನ್ನು ಸರಿಪಡಿಸಬೇಕಾಗಿದೆ. ಹೆಚ್ಚು ನುರಿತ ಉದ್ಯೋಗಗಳು, ಅತಿ ಹೆಚ್ಚು ಕೌಶಲಭರಿತ ಜನರಿಗೇ ಲಭಿಸಬೇಕು. ಈ ಮಾರ್ಗದಲ್ಲಿ ಶಿಕ್ಷಣ ತಜ್ಞರು ಹಾಗೂ ವೈದ್ಯರೂ ಬರಬಹುದು. ಆದರೆ ಕಂಪನಿಗಳಿಗೆ ಎಂಜಿನಿಯರ್‌ಗಳೇ ಬೇಕು. ಅತಿ ಹೆಚ್ಚು ವೇತನವುಳ್ಳವರನ್ನೇ ಅವರು ಇಲ್ಲಿಗೆ ಕರೆತರುತ್ತಿದ್ದಾರೆ’ ಎಂದು ಲುಟ್ನಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಚ್‌1ಬಿ ವೀಸಾ ಪರಿಷ್ಕರಣೆಗೆ ‘ಪ್ರಾಜೆಕ್ಟ್ ಫೈರ್‌ವಾಲ್‌’

‘ಅಗ್ಗದ ಟ್ರೈನಿಗಳು ಹಾಗೂ ತಾಂತ್ರಿಕ ಸಲಹೆಗಾರರನ್ನು ತೆಗೆದುಹಾಕಬೇಕು. ಇದು ನನ್ನ ಬಲವಾದ ವಾದ. ಟ್ರಂಪ್ ಕೂಡಾ ಇದನ್ನು ಒಪ್ಪುತ್ತಾರೆ ಎನ್ನುವುದು ನನ್ನ ಅನಿಸಿಕೆ. ಈ ಅಗ್ಗದ ತಂತ್ರಜ್ಞರು ತಾವೂ ಬರುವುದಲ್ಲದೆ, ತಮ್ಮ ಕುಟುಂಬದವರನ್ನೂ ಇಲ್ಲಿಗೆ ಕರೆತರುತ್ತಿದ್ದಾರೆ. ಇದು ತಪ್ಪು’ ಎಂದು ಲುಟ್ನಿಕ್‌ ಅಭಿಪ್ರಾಯಪಟ್ಟಿದ್ದಾರೆ. 

ಅಮೆರಿಕದ ಕಾರ್ಮಿಕ ಇಲಾಖೆಯು ಇದೇ ತಿಂಗಳು ‘ಪ್ರಾಜೆಕ್ಟ್ ಫೈರ್‌ವಾಲ್' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಇದು ಅಮೆರಿಕದ  ಕೌಶಲಭರಿತ ಕಾರ್ಮಿಕರ ಹಕ್ಕುಗಳು, ವೇತನಗಳು ಮತ್ತು ಉದ್ಯೋಗಾವಕಾಶಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ. ಯಾವುದೇ ಕಂಪನಿಯು ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಅರ್ಹ ಅಮೆರಿಕನ್ನರಿಗೆ ಆದ್ಯತೆ ನೀಡುವುದನ್ನು ಈ ಯೋಜನೆ ಖಚಿತಪಡಿಸಿಕೊಳ್ಳುತ್ತದೆ. ಒಂದೊಮ್ಮೆ H1B ವೀಸಾ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡರೆ ಉದ್ಯೋಗದಾತರೇ ಹೊಣೆಗಾರರಾಗುತ್ತಾರೆ.

ಅಮೆರಿಕದ ಉದ್ಯೋಗಿಗಳ ವೆಚ್ಚದಲ್ಲಿ ಯಾವುದೇ ಕಂಪನಿಗಳು ಎಚ್‌1ಬಿ ವೀಸಾ ದುರುಪಯೋಗಪಡಿಸಿಕೊಳ್ಳಬಾರದು. ಕಾರ್ಮಿಕ ಇಲಾಖೆ ಮತ್ತು ಫೆಡರಲ್ ಪಾಲುದಾರರು ಜತೆಗೂಡಿ ಹೆಚ್ಚು ಕೌಶಲಪೂರ್ಣ ಉದ್ಯೋಗಗಳು ಅಮೆರಿಕನ್ನರಿಗೇ ಮೊದಲು ದೊರೆಯುವುದನ್ನು ಖಚಿತಪಡಿಸಿಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.