ಢಾಕಾ: ಬಾಂಗ್ಲಾದೇಶದ ಇಸ್ಲಾಮಿಕ್ ಮೂಲಭೂತವಾದಿ, ವಿದ್ಯಾರ್ಥಿ ನಾಯಕ ಷರೀಫ್ ಒಸ್ಮಾನ್ ಹಾದಿ ಹತ್ಯೆ ಪ್ರಕರಣದ ಶಂಕಿತ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಫೈಸಲ್ ಕರೀಂ ಮಸೂದ್ ಅಲಿಯಾಸ್ ದೌಡ್(37) ತಮ್ಮ ಮೇಲೆ ಬಾಂಗ್ಲಾದ ಮಧ್ಯಂತರ ಸರ್ಕಾರ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ, ಕೊಲೆ ಮಾಡಿ ಭಾರತಕ್ಕೆ ಪರಾರಿಯಾಗಿದ್ದೇನೆ ಎಂಬ ಆರೋಪಗಳನ್ನು ಅಲ್ಲಗಳೆದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ಸಂಬಂಧ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ದೌಡ್, ನಾನು ದುಬೈನಲ್ಲಿದ್ದೇನೆ. ಡಿಸೆಂಬರ್ 18ರಂದು ನಡೆದ ಬಾಂಗ್ಲಾದ ವಿದ್ಯಾರ್ಥಿ ನಾಯಕ ಹಾದಿ ಹತ್ಯೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ಮಸೂದ್ ಮತ್ತು ಅಲಂಗೀರ್ ಶೇಖ್ ಅವರು ಹಾದಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಶಂಕಿತ ಆರೋಪಿಗಳು ಎಂದು ಡಿಸೆಂಬರ್ 28ರಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಹೇಳಿತ್ತು. ಅಲ್ಲದೆ, ಈ ಇಬ್ಬರೂ ಬಾಂಗ್ಲಾದೇಶದಿಂದ ಪಲಾಯನ ಮಾಡಿ ಸ್ಥಳೀಯ ಸಹಚರರ ಸಹಾಯದಿಂದ ಭಾರತದ ಮೇಘಾಲಯ ರಾಜ್ಯಕ್ಕೆ ಪ್ರವೇಶಿಸಿದ್ದಾರೆ ಎಂದು ಹೇಳಿಕೊಂಡಿತ್ತು.
ಆದರೆ, ಬಾಂಗ್ಲಾ ಸರ್ಕಾರದ ಈ ಹೇಳಿಕೆಯನ್ನು ಭಾರತ ನಿರಾಕರಿಸಿತ್ತು. ಇದೊಂದು ಕಪೋಲಕಲ್ಪಿತ ಮತ್ತು ದುರುದ್ದೇಶಪೂರಿತ ಎಂದು ಕರೆದಿತ್ತು.
ಹಾದಿ ಹತ್ಯೆ ಬಳಿಕ ಬಳಿಕ ಬಾಂಗ್ಲಾದೇಶದಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಹಿಂದೂಗಳ ಹತ್ಯೆಯಾಗಿದ್ದು, ಹಿಂದೂಗಳಿಗೆ ಸೇರಿದ ಮನೆಗಳು, ಅಂಗಡಿಗಳು, ಉದ್ಯಮ ಕೇಂದ್ರಗಳಿಗೆ ಬೆಂಕಿ ಹಚ್ಚಲಾಗಿದೆ.
ವಿಡಿಯೊ ಸಂದೇಶದಲ್ಲಿ ಮಸೂದ್ ಹೇಳಿದ್ದೇನು?
‘ನಾನು, ಫೈಸಲ್ ಕರೀಮ್ ಮಸೂದ್, ಹಾದಿಯ ಹತ್ಯೆಯಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ನನ್ನ ವಿರುದ್ಧದ ಈ ಪ್ರಕರಣವು ಸಂಪೂರ್ಣವಾಗಿ ಸುಳ್ಳು ಮತ್ತು ಕಟ್ಟುಕಥೆ ಪಿತೂರಿಯಿಂದ ಕೂಡಿದೆ. ಈ ಸುಳ್ಳು ಆರೋಪದ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ನಾನು ದೇಶವನ್ನು (ಬಾಂಗ್ಲಾದೇಶ) ಬಿಟ್ಟು ದುಬೈಗೆ ಬರಬೇಕಾಯಿತು. ನಾನು ಐದು ವರ್ಷಗಳ ಬಹು ಪ್ರವೇಶ ದುಬೈ ವೀಸಾವನ್ನು ಹೊಂದಿದ್ದರೂ ಸಹ, ಬಹಳ ಕಷ್ಟದಿಂದ ಇಲ್ಲಿಗೆ ಬಂದಿದ್ದೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.