ನ್ಯೂಯಾರ್ಕ್: ಪ್ರವಾಸಿ ಹೆಲಿಕಾಪ್ಟರ್ ಪತನಗೊಂಡು ನ್ಯೂಯಾರ್ಕ್ ನಗರದ ಹಡ್ಸನ್ ನದಿಗೆ ಬಿದ್ದಿದ್ದು, ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಸಾವಿಗೀಡಾಗಿದ್ದಾರೆ ಎಂದು ಮೇಯರ್ ಎರಿಕ್ ಆಡಮ್ಸ್ ಹೇಳಿದ್ದಾರೆ.
ಮೃತರಲ್ಲಿ ಸ್ಪೇನ್ ಮೂಲದ ಕುಟುಂಬ ಮತ್ತು ಪೈಲಟ್ ಇದ್ದಾರೆ ಎಂದು ಮೇಯರ್ ತಿಳಿಸಿದ್ದಾರೆ.
ಅಪಘಾತದ ವಿಡಿಯೊದಲ್ಲಿ ದೊಡ್ಡ ವಸ್ತುವೊಂದು ನದಿಗೆ ಬೀಳುತ್ತಿರುವಂತೆ ಕಂಡುಬಂದಿದೆ. ಕೆಲವು ಸೆಕೆಂಡುಗಳ ನಂತರ ಹೆಲಿಕಾಪ್ಟರ್‌ನ ಬ್ಲೇಡ್ ಕಾಣಿಸಿಕೊಂಡಿದೆ. ಬಳಿಕ, ತುರ್ತು ನಿರ್ವಹಣಾ ಮತ್ತು ಪೊಲೀಸ್ ದೋಣಿಗಳು ಹೆಲಿಕಾಪ್ಟರ್ ಬಳಿಗೆ ಆಗಮಿಸಿದ್ದು ಕಾರ್ಯಾಚರಣೆ ಕೈಗೊಂಡಿವೆ.
ನ್ಯೂಯಾರ್ಕ್‌ನಲ್ಲಿ ಹೆಲಿಕಾಪ್ಟರ್ ಪ್ರವಾಸಕ್ಕೆ ಬಳಸುವ ಬೆಲ್ 206 ಚಾಪರ್, ಮಧ್ಯಾಹ್ನ 3 ಗಂಟೆ ಸುಮಾರಿಗೆ ಡೌನ್‌ಟೌನ್ ಹೆಲಿಕಾಪ್ಟರ್ ಪ್ಯಾಡ್‌ನಿಂದ ಹೊರಟು ಹಡ್ಸನ್ ನದಿಯ ಮೇಲೆ ಉತ್ತರಕ್ಕೆ ಹಾರಿತ್ತು ಎಂದು ನ್ಯೂಯಾರ್ಕ್ ಪೊಲೀಸ್ ಆಯುಕ್ತ ಜೆಸ್ಸಿಕಾ ಟಿಶ್ ಹೇಳಿದ್ದಾರೆ.
ಬಳಿಕ, ಹೆಲಿಕಾಪ್ಟರ್ ಜಾರ್ಜ್ ವಾಷಿಂಗ್ಟನ್ ಸೇತುವೆ ಬಳಿಗೆ ತಲುಪಿದಾಗ ದಕ್ಷಿಣಕ್ಕೆ ತಿರುಗಿ ಅಪಘಾತಕ್ಕೀಡಾಗಿದೆ. ನ್ಯೂಜೆರ್ಸಿಯ ಹೊಬೊಕೆನ್‌ನಿಂದ ಸ್ವಲ್ಪ ದೂರದಲ್ಲಿ ಮಧ್ಯಾಹ್ನ 3:15ರ ಸುಮಾರಿಗೆ ಲೋವರ್ ಮ್ಯಾನ್‌ಹಟನ್ ಬಳಿ ನೀರಿಗೆ ಬಿದ್ದು ಮುಳುಗಿದೆ ಎಂದು ಟಿಶ್ ಹೇಳಿದ್ದಾರೆ.
ಪೈಲಟ್, ಇಬ್ಬರು ವ್ಯಕ್ತಿಗಳು ಮತ್ತು ಮೂವರು ಮಕ್ಕಳನ್ನು ಹೊರತೆಗೆಯುವಲ್ಲಿ ಮುಳುಗುತಜ್ಞರು ಯಶಸ್ವಿಯಾಗಿದ್ದಾರೆ. ಅಷ್ಟೊತ್ತಿಗೆ ನಾಲ್ವರು ಮೃತಪಟ್ಟಿದ್ದರು. ಉಳಿದಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮ್ಯಾನ್‌ಹಟನ್ ಸುತ್ತಮುತ್ತಲಿನ ವಾಯುಪ್ರದೇಶವು ಹೆಲಿಕಾಪ್ಟರ್‌ಗಳಿಂದ ತುಂಬಿದ್ದು, ಪ್ರವಾಸಿಗರಿಗೆ ಆಗಸದಿಂದ ನದಿ, ಸುತ್ತಲಿನ ಪ್ರದೇಶದ ಪಕ್ಷಿನೋಟವನ್ನು ಕಣ್ತುಂಬಿಸಿಕೊಳ್ಳುವ ಸೇವೆ ಒದಗಿಸುತ್ತಿವೆ.
ಫೆಡರಲ್ ವಿಮಾನಯಾನ ಆಡಳಿತ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಅಪಘಾತದ ಬಗ್ಗೆ ತನಿಖೆ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.