ADVERTISEMENT

ಮೇರಿಲ್ಯಾಂಡ್‌: ಹಿಂದೂ ದೇಗುಲ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 14:10 IST
Last Updated 29 ಆಗಸ್ಟ್ 2022, 14:10 IST
ಮೇರಿಲ್ಯಾಂಡ್‌ನ ಜೆಎಸ್‌ಎಸ್‌ ಅಧ್ಯಾತ್ಮಿಕ ಮಿಷನ್‌ನಲ್ಲಿ ಜೆಎಸ್‌ಎಸ್‌ ಹಿಂದೂ ದೇವಾಲಯದ ಭೂಮಿಪೂಜೆಯನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೆರವೇರಿಸಿದರು. ಉಮೇಶ್‌ ಜಿಮ್‌, ಕೆನ್‌ ರಿಚರ್ಡ್‌, ಲಿಲಿ ಕ್ಯು, ಕೆಸ್‌ಮನ್‌, ಅರುಣಾ ಮಿಲ್ಲರ್‌, ಮಾರ್ಕ್‌ ಎಲ್ರಿಚ್‌, ಅನ್ಸುಲ್‌ ಶರ್ಮಾ ಇದ್ದಾರೆ
ಮೇರಿಲ್ಯಾಂಡ್‌ನ ಜೆಎಸ್‌ಎಸ್‌ ಅಧ್ಯಾತ್ಮಿಕ ಮಿಷನ್‌ನಲ್ಲಿ ಜೆಎಸ್‌ಎಸ್‌ ಹಿಂದೂ ದೇವಾಲಯದ ಭೂಮಿಪೂಜೆಯನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೆರವೇರಿಸಿದರು. ಉಮೇಶ್‌ ಜಿಮ್‌, ಕೆನ್‌ ರಿಚರ್ಡ್‌, ಲಿಲಿ ಕ್ಯು, ಕೆಸ್‌ಮನ್‌, ಅರುಣಾ ಮಿಲ್ಲರ್‌, ಮಾರ್ಕ್‌ ಎಲ್ರಿಚ್‌, ಅನ್ಸುಲ್‌ ಶರ್ಮಾ ಇದ್ದಾರೆ   

ಮೈಸೂರು: ಅಮೆರಿಕದ ಮೇರಿಲ್ಯಾಂಡ್‌ನ ಗೇಥರ್ಸ್‌ಬರ್ಗ್‌ನಲ್ಲಿರುವ ಜೆಎಸ್‌ಎಸ್‌ ಆಧ್ಯಾತ್ಮಿಕ ಮಿಷನ್‌ನಲ್ಲಿ ಜೆಎಸ್‌ಎಸ್‌ ಹಿಂದೂ ದೇವಾಲಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಶ್ರೀಗಳ 107ನೇ ಜಯಂತಿ ಮಹೋತ್ಸವದ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು.

ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಮನುಷ್ಯನು ತನ್ನೆಲ್ಲ ಲೌಕಿಕ ಕಾರ್ಯಚಟುವಟಿಕೆಗಳ ನಡುವೆ ಆಧ್ಯಾತ್ಮಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ’ ಎಂದು ತಿಳಿಸಿದರು.

ADVERTISEMENT

‘ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಸದಾಶಯದಂತೆ ಜೆಎಸ್‌ಎಸ್‌ ಆಧ್ಯಾತ್ಮಿಕ ಮಿಷನ್ ಸ್ಥಾಪನೆಯಾಗಿದೆ. ಇದರ ಮೂಲಕ ಭಾರತೀಯ ಸಂಸ್ಕೃತಿಯ ಪ್ರಸಾರಕ್ಕಾಗಿ ಎಲ್ಲ ಪ್ರಯತ್ನವನ್ನೂ ಮಾಡಲಾಗುತ್ತಿದೆ’ ಎಂದರು.

ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ‘ಅಮೆರಿಕ ಈ ಸ್ಥಳದಲ್ಲಿ ಆಧ್ಯಾತ್ಮಿಕ ವಾತಾವರಣ ಇರುವುದನ್ನು ನಾವೆಲ್ಲರೂ ಗಮನಿಸಬೇಕು. ಶಿಲಾ ಭಕ್ತಿ, ನರಭಕ್ತಿ ಮತ್ತು ಭೂಭಕ್ತಿಗಳು ಸೇರಿದಾಗ ಮಾತ್ರ ದೇವಸ್ಥಾನದ ನಿರ್ಮಾಣ ಸುಗಮವಾಗಿ ಆಗಲು ಸಾಧ್ಯವಾಗುತ್ತದೆ’ ಎಂದು ನುಡಿದರು.

‘ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅಚರಿಸುತ್ತಿದೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಮಾಂಟ್‌ಗೊಮರಿಯ ಕೌಂಟಿಯಲ್ಲಿದ್ದು, ಅವರ ಭಾವನೆಗಳಿಗೆ ಸಹಕರಿಸಲಾಗುತ್ತದೆ’ ಎಂದುಮಾಂಟ್‌ಗೊಮರಿ ಕೌಂಟಿಯ ಕಾರ್ಯನಿರ್ವಾಹಕ ಮಾರ್ಕ್‌ ಎಲ್ರಿಚ್‌ ತಿಳಿಸಿದರು.

ಮೇರಿಲ್ಯಾಂಡ್‌ನ ಮಾಜಿ ಡೆಲಿಗೇಟ್‌ ಅರುಣಾ ಮಿಲ್ಲರ್‌, ಭಾರತದ ರಾಯಭಾರ ಕಚೇರಿಯ ಶೈಕ್ಷಣಿಕ ಮತ್ತು ಸಮುದಾಯ ವಿಭಾಗದ ಕೌನ್ಸಿಲರ್‌ ಅನ್ಸುಲ್‌ ಶರ್ಮಾ, ಮೇರಿಲ್ಯಾಂಡ್‌ ಪ್ರಾಂತ್ಯದ ಅಂತರಧರ್ಮೀಯ ಸಂಬಂಧಗಳ ಮುಖಂಡ ಮ್ಯಾನ್ಸ್‌ಫೀಲ್ಡ್‌ ಕೇಸಿ ಕೆಸ್‌ಮನ್‌, ಮೇರಿಲ್ಯಾಂಡ್‌ನ ಡೆಲಿಗೇಟ್‌ ಲಿಲಿ ಕ್ಯು, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ, ಹಾನ್‌ಸೆನ್‌ ಬೆಂಜಮಿನ್‌ ಎಲ್‌ ಕಾರ್ಡಿನ್‌ನ ಸಹಾಯಕ ಕೆನ್‌ ರಿಚರ್ಡ್‌ ಮಾತನಾಡಿದರು.

ಡಾ.ಬಾಬು ಕಿಲಾರ ಸ್ವಾಗತಿಸಿದರು. ಉಷಾಚಾರ್‌ ಮತ್ತು ತಂಡದವರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಸಾನಿಕಾ ಮಹಾಶೆಟ್ಟಿ ಪ್ರಾರ್ಥಿಸಿದರು. ರೂಪಾ ದಾಸರಿ ವಂದಿಸಿದರು. ತ್ರಿಶೂಲ್‌ ನಾಗೇನಹಳ್ಳಿ ಹಾಗೂ ಜಿಗ್ನಾ ಗೋಯಲ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.