ADVERTISEMENT

ಹಾಂಗ್‌ಕಾಂಗ್‌ನಲ್ಲಿ ಸಂಪಾದಕರ ಬಂಧನ: ಪತ್ರಿಕೆಯ ಮುದ್ರಣ ಹೆಚ್ಚಳ

ಹೆಚ್ಚು ಖರೀದಿ ಮೂಲಕ ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ ಬೆಂಬಲಿಸಿದ ನಾಗರಿಕರು

ಏಜೆನ್ಸೀಸ್
Published 18 ಜೂನ್ 2021, 6:15 IST
Last Updated 18 ಜೂನ್ 2021, 6:15 IST
ಹಾಂಗ್‌ಕಾಂಗ್‌ನ ಆಪಲ್ ಡೈಲಿ ಪತ್ರಿಕೆಯ ಮುಖ್ಯ ಸಂಪಾದಕ ರ‍್ಯಾನ್ ಲಾ
ಹಾಂಗ್‌ಕಾಂಗ್‌ನ ಆಪಲ್ ಡೈಲಿ ಪತ್ರಿಕೆಯ ಮುಖ್ಯ ಸಂಪಾದಕ ರ‍್ಯಾನ್ ಲಾ   

ಹಾಂಕ್‌ಗಾಂಗ್‌: ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸಿದ ಆರೋಪದ ಮೇಲೆ ಐವರು ಸಂಪಾದಕರು ಮತ್ತು ಕಾರ್ಯ ನಿರ್ವಾಹಕರ ಬಂಧನವನ್ನು ಖಂಡಿಸಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪತ್ರಿಕೆಗಳನ್ನು ಖರೀದಿಸುವ ಮೂಲಕ ಪತ್ರಿಕಾ ಸ್ವಾತಂತ್ಯದ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಪ್ರಜಾಪ್ರಭುತ್ವ ಪರ ದಿನಪತ್ರಿಕೆ ‘ಆ್ಯಪಲ್ ಡೇಲಿ‘ ಶುಕ್ರವಾರ ಪತ್ರಿಕೆಯ ಮುದ್ರಣವನ್ನು 5 ಲಕ್ಷ ಪ್ರತಿಗಳಿಗೆ ಹೆಚ್ಚಿಸಿದೆ.

ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಪೊಲೀಸರು ಗುರುವಾರ ಐವರು ಸಂಪಾದಕರು ಮತ್ತು ಕಾರ್ಯ ನಿರ್ವಾಹಕರನ್ನು ಬಂಧಿಸಿದ್ದರು. ಇದೇ ಮೊದಲ ಬಾರಿಗೆ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಈ ಕಾಯ್ದೆಯನ್ನು ಬಳಸಲಾಗಿದೆ.

ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂಬ ಶಂಕೆಯ ಮೇಲೆ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿರುವ 30 ಲೇಖನಗಳನ್ನು ಆಧರಿಸಿ ಸಂಪಾದಕರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬರಹಗಳಲ್ಲಿ ಚೀನಾ ಮತ್ತು ಹಾಂಗ್ ಕಾಂಗ್ ವಿರುದ್ಧ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ವಿಧಿಸಬೇಕೆಂಬ ಮಾಹಿತಿ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ವಿರೋಧಿ ಪ್ರತಿಭಟನೆಗಳು ಮೌನವಾಗುತ್ತಾ, ಹಾಂಗ್‌ಕಾಂಗ್‌ನಲ್ಲಿರುವ ಪ್ರಮುಖ ಪ್ರಜಾಪ್ರಭುತ್ವ ಪರ ಹೋರಾಟಗಾರರು ಜೈಲು ಸೇರಿದ್ದಾರೆ. ಇಲ್ಲಿನ ನಾಗರಿಕರು ತಮಗೆ ಅನುಕೂಲವಿರುವ ಅಂಗಡಿಗಳಿಂದ ಪತ್ರಿಕೆಗಳನ್ನು ಖರೀದಿಸಿ ಓದಲು ಆರಂಭಿಸಿದರು.

‘ಹಾಂಗ್‌ಕಾಂಗ್‌ನಲ್ಲಿ ಈಗಾಗಲೇ ಸಾಕಷ್ಟು ಅನ್ಯಾಯಗಳು ನಡೆಯುತ್ತಿವೆ. ನಾವು ಇನ್ನು ಮುಂದೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ‘ ಎಂದು ನಿವಾಸಿ ಲಿಸಾ ಚೆಯುಂಗ್ ಹೇಳಿದರು.

‘ಪತ್ರಿಕೆಗಳನ್ನು ಖರೀದಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುವುದನ್ನು ಬಿಟ್ಟರೆ,ನಮಗೆ ಬೇರೇನೂ ಮಾಡಲು ಸಾಧ್ಯವಿಲ್ಲ. ಕಾನೂನಿನಿಂದ ಹಾಂಗ್‌ಕಾಂಗ್‌ ಜನರನ್ನು ರಕ್ಷಿಸಲು ಸಾಧ್ಯವಾಗದಿದ್ದಾಗ, ನಮಗೆ ಆಗುವ ಕೆಲಸವನ್ನು ಮಾತ್ರ ನಾವು ಮಾಡಬಹುದು‘ ಎಂದು ಚೆಯುಂಗ್ ಹೇಳಿದರು. ಮತ್ತೊಬ್ಬ ನಿವಾಸಿ ವಿಲಿಯಮ್ ಚಾನ್‌, ಪತ್ರಿಕೆಗಳನ್ನು ಖರೀದಿಸುವ ಮೂಲಕ ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಶುಕ್ರವಾರದ ಆವೃತ್ತಿಯ ಮೊದಲ ಪುಟದಲ್ಲಿ ಐವರು ಸಂಪಾದಕರು ಮತ್ತು ಕಾರ್ಯನಿರ್ವಾಹಕರ ಚಿತ್ರಗಳನ್ನು ದೊಡ್ಡದಾಗಿ ಮುದ್ರಿಸಲಾಗಿದೆ. ಮೊನ್ನೆ ನಡೆದ ದಾಳಿಯಲ್ಲಿ ಪೊಲೀಸರು ಪತ್ರಿಕಾಲಯದಿಂದ 44 ಹಾರ್ಡ್ ಡ್ರೈವ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.