
ಹಾಂಗ್‌ಕಾಂಗ್: ಇಲ್ಲಿನ ವಸತಿ ಸಮುಚ್ಛಯದ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವಿನ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಸುಮಾರು 280ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ ವಸತಿ ಸಮುಚ್ಛಯದ ನಾಲ್ಕು ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನವೀಕರಣ ಕೆಲಸಕ್ಕಾಗಿ ಕಟ್ಟಡಗಳ ಸುತ್ತಲು ಬಿದಿರಿನ ಕಂಬಗಳನ್ನು ಅಳವಡಿಸಿದ್ದರಿಂದ ಬೆಂಕಿ ಮತ್ತಷ್ಟು ವ್ಯಾಪಿಸಿತ್ತು. ಬೆಂಕಿಯ ಜ್ವಾಲೆಗೆ ಸಿಕ್ಕಿದವರಲ್ಲಿ ಹೆಚ್ಚಿನವರು ವೃದ್ಧರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘200 ಅಗ್ನಿಶಾಮಕ ವಾಹನಗಳು ಮತ್ತು 100 ಆ್ಯಂಬುಲೆನ್ಸ್‌ಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ಇದೀಗ ಬೆಂಕಿ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ, ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್, ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದಾರೆ. ಸ್ಥಳದಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಉತ್ತರ ತೈ ಪೋ ಜಿಲ್ಲೆಯಲ್ಲಿ 1980ರಲ್ಲಿ ನಿರ್ಮಿಸಲಾದ ಈ ವಸತಿ ಸಮುಚ್ಛಯ ಒಟ್ಟು 8 ಕಟ್ಟಡಗಳನ್ನು ಹೊಂದಿದೆ. ಇಲ್ಲಿರುವ 2 ಸಾವಿರ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 4,800 ನಿವಾಸಿಗಳು ವಾಸಿಸುತ್ತಿದ್ದಾರೆ. ಇತ್ತೀಚೆಗೆ ಕಟ್ಟಡಗಳ ನವೀಕರಣ ಕೆಲಸ ಆರಂಭವಾಗಿತ್ತು.
1996ರ ನಂತರ ಹಾಂಗ್‌ಕಾಂಗ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ ಇದಾಗಿದೆ. ಆಗ ಕೌಲೂನ್‌ನ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 41 ಮಂದಿ ಮೃತಪಟ್ಟಿದ್ದರು.