ADVERTISEMENT

ನರೇಂದ್ರ ಮೋದಿ ನಿರೀಕ್ಷೆಯಲ್ಲಿ ಹ್ಯೂಸ್ಟನ್‌; ಸಂಭ್ರಮದಲ್ಲಿ ಅಮೆರಿಕ ಭಾರತೀಯರು

ಹೌಡಿ ಮೋದಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 14:47 IST
Last Updated 22 ಸೆಪ್ಟೆಂಬರ್ 2019, 14:47 IST
   

ಹ್ಯೂಸ್ಟನ್‌: ಇಲ್ಲಿನ ಎನ್‌ಆರ್‌ಜಿ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಸಾಲುಗಟ್ಟಿ ನಿಂತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಬಹುನಿರೀಕ್ಷಿತ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ಈಗಾಗಲೇ ಕ್ರೀಡಾಂಗಣದಲ್ಲಿ ಸೇರಿರುವ ಜನರು ಡೊಳ್ಳು ಸೇರಿದಂತೆ ಹಲವುವಾದ್ಯಗಳ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಭಾರತ ಮತ್ತು ಅಮೆರಿಕದ ಹಲವು ಟಿವಿ ಮಾಧ್ಯಮಗಳು ಹೌಡಿ ಮೋದಿ ಕಾರ್ಯಕ್ರಮದ ನೇರ ಪ್ರಸಾರ ಮಾಡುತ್ತಿವೆ.

ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹ ಭಾಗಿಯಾಗಲಿದ್ದಾರೆ. ಸುಮಾರು 50 ಸಾವಿರ ಜನರು ಕ್ರೀಡಾಂಗಣದಲ್ಲಿ ಸೇರುವ ಸಾಧ್ಯತೆಯಿದೆ. ಪೋಪ್‌ ಹೊರತುಪಡಿಸಿದರೆ, ಅಮೆರಿಕದಲ್ಲಿ ವಿದೇಶದ ಯಾವುದೇ ಚುನಾಯಿತ ನಾಯಕ ಸೇರಿದಾಗಲೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದಿಲ್ಲ ಎನ್ನಲಾಗಿದೆ.

ಅಮೆರಿಕಕ್ಕೆ ನಾಲ್ಕನೇ ಬಾರಿ ಭೇಟಿ ನೀಡಿರುವ ಪ್ರಧಾನಿ ಮೋದಿ ಇಂಧನ ವಲಯದ ಕಂಪನಿಗಳ 17 ಸಿಇಒಗಳೊಂದಿಗೆ ಸಭೆಯಲ್ಲಿ ಭಾಗಿಯಾದರು. 17 ಕಂಪನಿಗಳು ಭಾರತ ಸೇರಿದಂತೆ 150 ರಾಷ್ಟ್ರಗಳಲ್ಲಿ ಕಾರ್ಯಾಚರಣೆ ಹೊಂದಿದ್ದು, 1 ಟ್ರಿಲಿಯನ್‌ ಡಾಲರ್‌ ಮೌಲ್ಯ ಹೊಂದಿವೆ.

‘ಹೌಡಿ’ ಎಂದರೆ ಅನೌಪಚಾರಿಕವಾಗಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಒಂದು ಪದ. ‘ಹೌ ಡು ಯು ಡು ಅಥವಾ ಹೇಗಿದ್ದೀರಿ’ ಎಂಬ ಪದದ ಸಂಕ್ಷಿಪ್ತ ರೂಪವಾಗಿ ಬಳಕೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.