ADVERTISEMENT

ಕೋವಿಡ್ ಹೋರಾಟಕ್ಕೆ ವೈದ್ಯಕೀಯ ಡ್ರೋನ್

​ಪ್ರಜಾವಾಣಿ ವಾರ್ತೆ
Published 10 ಮೇ 2020, 20:30 IST
Last Updated 10 ಮೇ 2020, 20:30 IST
ಚಿಲಿ ದೇಶದಲ್ಲಿ ಡ್ರೋನ್ ಮೂಲಕ ಔಷಧಗಳನ್ನು ಸಾಗಿಸುತ್ತಿರುವುದು - ರಾಯಿಟರ್ಸ್ ಚಿತ್ರ
ಚಿಲಿ ದೇಶದಲ್ಲಿ ಡ್ರೋನ್ ಮೂಲಕ ಔಷಧಗಳನ್ನು ಸಾಗಿಸುತ್ತಿರುವುದು - ರಾಯಿಟರ್ಸ್ ಚಿತ್ರ    
""

ಕೋವಿಡ್–19 ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನದ ಪಾತ್ರ ವಿಸ್ತರಿಸುತ್ತಿದೆ. ತೀರ ಅಗತ್ಯದ ಔಷಧಗಳನ್ನು ಎಂತಹ ಸ್ಥಳಕ್ಕಾದರೂ ತುರ್ತಾಗಿ ತಲುಪಿಸಬಲ್ಲ ಡ್ರೋನ್‌ಗಳು ಈಗ ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ನೆರವಿಗೆ ಬಂದಿವೆ. ಭಾರತಲ್ಲಿ ಇಂತಹ ಯೋಜನೆ ಗರಿಬಿಚ್ಚಿದೆ. ಕೋವಿಡ್‌ ಹೋರಾಟಕ್ಕೆ‌ ಡ್ರೋನ್ ಬಳಕೆಯನ್ನು ದೇಶ ಎದುರು ನೋಡುತ್ತಿದೆ. ಆಫ್ರಿಕಾದ ಕೆಲ ದೇಶಗಳು, ಚೀನಾ, ಚಿಲಿ, ಅಮೆರಿಕದಲ್ಲಿ ಡ್ರೋನ್ ಮೂಲಕ ಪಿಪಿಇ ಕಿಟ್, ರಕ್ತದ ಮಾದರಿ ಹಾಗೂ ಉಪಕರಣಗಳನ್ನು ರವಾನಿಸಲಾಗುತ್ತಿದೆ

ಆಫ್ರಿಕಾದಲ್ಲಿ ಯಶಸ್ವಿ ಯತ್ನ

ಕೆಲವು ವರ್ಷಗಳಿಂದ ಆಫ್ರಿಕಾದ ಕುಗ್ರಾಮಗಳಲ್ಲಿರುವ ಕ್ಲಿನಿಕ್ ಹಾಗೂ ಆಸ್ಪತ್ರೆಗಳಿಗೆ ರಕ್ತ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಅಮೆರಿಕದ ಮೆಡಿಕಲ್ ಡ್ರೋನ್ ಕಂಪನಿ ಝಿಪ್‌ಲೈನ್ ಪೂರೈಸುತ್ತಿದೆ. ರವಾಂಡಾ ಮತ್ತು ಘಾನಾದಲ್ಲಿ ವೈದ್ಯಕೀಯ ಉಪಕರಣಗಳನ್ನು ಡ್ರೋನ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಇದೀಗ ಕೋವಿಡ್‌ನ ತುರ್ತು ಕೆಲಸಗಳಿಗೆ ಡ್ರೋನ್‌ಗಳು ರೆಕ್ಕೆಬಿಚ್ಚಿ ಹಾರಾಡುತ್ತಿವೆ. ಕೊರೊನಾ ವೈರಸ್‌ ಪರೀಕ್ಷಾ ಸ್ಯಾಂಪಲ್‌ಗಳು ಹಾಗೂ ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡಲಾಗುತ್ತಿದೆ. ಕಾರಿನಲ್ಲಿ ಸಂಚರಿಸಿದರೆ ದಿನಿವಿಡೀ ತಗಲುತ್ತಿದ್ದ ಪ್ರಯಾಣ ಇದೀಗ ಗಂಟೆಯೊಳಗೆ ಮುಗಿದುಹೋಗುತ್ತಿದೆ. ಅಗತ್ಯ ಉಪಕರಣಗಳು ಕಡಿಮೆ ಅವಧಿಯಲ್ಲಿ ತಲುಪುತ್ತಿವೆ.

ADVERTISEMENT

*ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಡ್ರೋನ್‌ಗಳ ಬಳಕೆಯನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗುವ ನೀತಿ, ವಾತಾವರಣವನ್ನು ಕೇಂದ್ರ ಸರ್ಕಾರ ನಿರ್ಮಿಸಿದೆ

*ನಾಗರಿಕ ವಿಮಾನಯಾನ ಸಚಿವಾಲಯವು ‘ಡಿಜಿಟಲ್ ಸ್ಪೈ’ ವೇದಿಕೆ ಸೃಷ್ಟಿಸಿದ್ದು,ಕೋವಿಡ್–19ಕ್ಕೆ ಸಂಬಂಧಿಸಿದ ಡ್ರೋನ್ ವಿಶೇಷ ಹಾರಾಟದ ಮನವಿಗಳನ್ನು ಪರಿಗಣಿಸುತ್ತಿದೆ

*ಜಾಗತಿಕ ಆರ್ಥಿಕ ವೇದಿಕೆಯ ‘ಮೆಡಿಸಿನ್ ಫ್ರಮ್ ದಿ ಸ್ಕೈ’ ಯೋಜನೆಯಡಿ ತೆಲಂಗಾಣ ಸರ್ಕಾರ, ಅಪೊಲೊ ಆಸ್ಪತ್ರೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತದಾದ್ಯಂತ ಡ್ರೋನ್‌ ಮೂಲಕವೈದ್ಯಕೀಯ ಸರಕು ವಿತರಣಾ ಸಾಮರ್ಥ್ಯ ‍ಪರೀಕ್ಷಿಸುವ ಪ್ರಾಯೋಗಿಕ ಯೋಜನೆಗೆ ಸಿದ್ಧತೆ ನಡೆಯುತ್ತಿದೆ

ಯಶಸ್ಸಿನ ಎಳೆಗಳು

*ಆಫ್ರಿಕಾ ಸೇರಿದಂತೆ ಅಮೆರಿಕ, ಚೀನಾ, ಚಿಲಿ ದೇಶಗಳಲ್ಲೂ ‘ಡ್ರೋನ್ ಡೆಲಿವರಿ’ ಯತ್ನಗಳು ನಡೆಯುತ್ತಿವೆ

*ಕೋವಿಡ್ ಪೀಡಿತ ಚೀನಾದ ಬೀದಿಗಳನ್ನು ಸೋಂಕುರಹಿತಗೊಳಿಸುವಲ್ಲಿ ಡ್ರೋನ್‌ಗಳ ಪಾತ್ರ ಹಿರಿದು

*ಚಿಲಿ ದೇಶದ ಸಣ್ಣ ಸಣ್ಣ ಸಮುದಾಯಗಳಿಗೆ ಡ್ರೋನ್‌ಗಳು ವೈದ್ಯಕೀಯ ಸಲಕರಣೆ ಪೂರೈಸಿವೆ

*ಕಳೆದ ವರ್ಷ ಮೇರಿಲ್ಯಾಂಡ್ ವಿಶ್ವವಿದ್ಯಾಲದ ಡ್ರೋನ್‌ ಮೂಲಕ ವ್ಯಕ್ತಿಯೊಬ್ಬರ ಕಿಡ್ನಿಯನ್ನು ಆಸ್ಪತ್ರೆಗೆ ಸಾಗಿಸಿ ಕಸಿ ಮಾಡಲಾಗಿತ್ತು

*ರವಾಂಡದಲ್ಲಿ ಝಿಪ್‌ಲೈನ್ ಡ್ರೋನ್‌ಗಳು 10 ಲಕ್ಷ ಕಿಲೋಮೀಟರ್ ಸಂಚರಿಸಿ ಸುಮಾರು 13 ಸಾವಿರ ಬಾರಿ (ಡೆಲಿವರಿ) ಸರಕು ಪೂರೈಸಿವೆ

ಐಸೋಲೇಷನ್‌ಗೂ ಸಹಾಯ

ವಯಸ್ಸಾದವರು, ದುರ್ಬಲ ಆರೋಗ್ಯದ ವ್ಯಕ್ತಿಗಳು ಅಥವಾತಕ್ಷಣ ಆಸ್ಪತ್ರೆಗೆ ತೆರಳಲು ಸಾಧ್ಯವಾಗದವರು ತಾವಿರುವಲ್ಲಿ ಪ್ರತ್ಯೇಕವಾಗಿರಲು (ಐಸೋಲೇಷನ್‌) ಬಯಸಿದರೆ, ಅಂತವರಿಗೂ ಡ್ರೋನ್‌ಗಳು ನೆರವಾಗಿವೆ. ಪ್ರತ್ಯೇಕವಾಗಿ ವಾಸಿಸುವವರಿಗೆ ಬೇಕಾದ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿವೆ.

ಡ್ರೋನ್ ಬಳಕೆಗೆ ಜಾಗೃತಿ

ಕೋವಿಡ್ ನಿಯಂತ್ರಣದಲ್ಲಿ ಡ್ರೋನ್‌ಗಳನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕುಎಂಬ ಕುರಿತಂತೆ ವಿಶ್ವಬ್ಯಾಂಕ್, ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆ (ಐಸಿಎಒ) ಹಾಗೂ ಕೆಲವು ಡ್ರೋನ್ ಸಂಸ್ಥೆಗಳು ಜಾಗೃತಿ ಮೂಡಿಸುತ್ತಿವೆ.ಏಪ್ರಿಲ್ ತಿಂಗಳ ಆರಂಭದಲ್ಲಿ, ಫೋರಂನ ಏರೋಸ್ಪೇಸ್ ಮತ್ತು ಡ್ರೋನ್ಸ್ ಸಮುದಾಯವು 400ಕ್ಕೂ ಹೆಚ್ಚು ಉದ್ಯಮ ಸಮೂಹದವರನ್ನು ಒಟ್ಟುಗೂಡಿಸಿತ್ತು. ಡ್ರೋನ್‌ಗಳು ಕೋವಿಡ್‌–19ರ ಜತೆ ಹೇಗೆ ಹೋರಾಡಬಲ್ಲವು ಮತ್ತು ಅವುಗಳನ್ನು ಸರಬರಾಜು ಸರಪಳಿಯಲ್ಲಿ ಹೇಗೆ ಸಂಯೋಜಿಸುವುದು ಉತ್ತಮ ಎಂದು ಚರ್ಚಿಸಲಾಯಿತು

ಆಧಾರ: ವಿವಿಧ ಮೂಲಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.