ಮಾಸ್ಕೋ(ರಷ್ಯಾ): ಕಾರಾಗೃಹದಲ್ಲಿ ಮೃತಪಟ್ಟ ತಮ್ಮ ಪತಿ, ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಕುರಿತಂತೆ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಯುಲಿಯಾ ನವಾಲ್ನಿ, ‘ಐ ಲವ್ ಯು’ ಎಂದು ರಷ್ಯನ್ ಭಾಷೆಯಲ್ಲಿ ಬರೆದುಕೊಂಡಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಡಳಿತದಲ್ಲಿನ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವ ಮೂಲಕ ಪ್ರಬಲ ವಿರೋಧ ಪಕ್ಷದ ನಾಯಕನಾಗಿ ಗುರುತಿಸಿಕೊಂಡಿದ್ದ, ತದನಂತರ ವಿಧ್ವಂಸಕ ಕೃತ್ಯದ ಆರೋಪದ ಮೇಲೆ ಜೈಲು ಪಾಲಾಗಿದ್ದ ಅಲೆಕ್ಸಿ ನವಾಲ್ನಿ ಫೆಬ್ರುವರಿ 16ರಂದು ಕಾರಾಗೃಹದಲ್ಲಿ ಮೃತಪಟ್ಟಿದ್ದರು. ಪತಿ ಅಗಲಿದ ನಾಲ್ಕು ದಿನಗಳ ಬಳಿಕ ಯುಲಿಯಾ, ಪತಿಯೊಂದಿಗೆ ಕಳೆದ ಆತ್ಮೀಯ ಕ್ಷಣವೊಂದರ ಫೋಟೊ ಹಂಚಿಕೊಂಡಿದ್ದಾರೆ.
ಯುಲಿಯಾ ಅವರ ತಲೆಗೆ ಅಲೆಕ್ಸಿ ಅವರು ಮುತ್ತು ಕೊಡುತ್ತಿರುವ ಫೋಟೊ ಇದಾಗಿದ್ದು, ಪೋಸ್ಟ್ ನೋಡಿದ ಹಲವು ಅಭಿಮಾನಿಗಳು, ಯುಲಿಯಾ ಅವರಿಗೆ ಸಮಾಧಾನದ ಮಾತನ್ನು ಹೇಳಿದ್ದಾರೆ.
19 ವರ್ಷ ಕಾರಾಗೃಹ ಶಿಕ್ಷೆಗೊಳಗಾಗಿದ್ದ ಅಲೆಕ್ಸಿ
ವಿಧ್ವಂಸಕ ಕೃತ್ಯದ ಆರೋಪ ಮೇಲೆ ಅಲೆಕ್ಸಿ ಅವರಿಗೆ 19 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಬಂಧನವಾಗಿದ್ದ ಅಲೆಕ್ಸಿ ಅವರನ್ನು ಮೊದಲಿಗೆ ರಷ್ಯಾ ಕೇಂದ್ರೀಯ ಕಾರಾಗೃಹದಲ್ಲಿ ಇರಿಸಲಾಗಿತ್ತು. ನಂತರ ಬಿಗಿ ಭದ್ರತೆಯಿರುವ ಮತ್ತೊಂದು ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.
‘ಶುಕ್ರವಾರ(ಫೆ.16) ಬೆಳಿಗ್ಗೆ ವಾಯುವಿಹಾರ ಮಾಡುತ್ತಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿ ಅಲೆಕ್ಸಿ ಅವರು ಪ್ರಜ್ಞೆ ಕಳೆದುಕೊಂಡಿದ್ದು, ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದರು’ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದರು.
ಅಲೆಕ್ಸಿ ಅವರ ಸಾವಿಗೆ ಪುಟಿನ್ ಸರ್ಕಾರವೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.