ಓವಲ್ ಕಚೇರಿಯಿಂದ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಜೋ ಬೈಡನ್
-ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ದೇಶದ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ಹಾಗೂ ಹೊಸ ತಲೆಮಾರಿಗೆ ಅವಕಾಶ ನೀಡುವ ಸಲುವಾಗಿ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ತಮ್ಮ ಓವಲ್ ಕಚೇರಿಯಿಂದ ಬುಧವಾರ ರಾತ್ರಿ (ಭಾರತೀಯ ಕಾಲಮಾನ ಗುರುವಾರ ಮುಂಜಾನೆ) ದೇಶವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
‘ನಾನು ಈ ಕಚೇರಿಯನ್ನು ಗೌರವಿಸುತ್ತೇನೆ, ಅದಕ್ಕಿಂತಲೂ ಹೆಚ್ಚಾಗಿ ದೇಶವನ್ನು ಪ್ರೀತಿಸುತ್ತೇನೆ. ಹೊಸ ತಲೆಮಾರಿಗೆ ದೀವಟಿಗೆಯನ್ನು ಹಸ್ತಾಂತರಿಸುವುದು ಉತ್ತಮ ಎಂದು ನಾನು ನಿರ್ಧರಿಸಿದೆ. ದೇಶವನ್ನು ಒಟ್ಟುಗೂಡಿಸಲು ಇದು ಉತ್ತಮ ಮಾರ್ಗ’ ಎಂದು ಬೈಡನ್ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟು 11 ನಿಮಿಷ ಭಾಷಣ ಮಾಡಿದ ಬೈಡನ್, ಟ್ರಂಪ್ ಅವರ ಹೆಸರು ಉಲ್ಲೇಖಿಸಿದೇ, ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಅಮೆರಿಕನ್ನರು ಎದುರಿಸುವ ಅಪಾಯಗಳನ್ನು ಪಟ್ಟಿ ಮಾಡಿದರು.
‘ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ಯಾವುದೂ ಅಡ್ಡಿಯಾಗುವುದಿಲ್ಲ. ಅದು ವೈಯಕ್ತಿಕ ಮಹತ್ವಾಕಾಂಕ್ಷೆಯನ್ನು ಒಳಗೊಂಡಿದೆ’ ಎಂದು ಟ್ರಂಪ್ ಕುರಿತು ಪರೋಕ್ಷವಾಗಿ ಹೇಳಿದರು.
‘ದೊರೆಗಳು ಹಾಗೂ ಸರ್ವಾಧಿಕಾರಿಳು ಆಳ್ವಿಕೆ ನಡೆಸಿಲ್ಲ ಎಂಬುದೇ ಅಮೆರಿಕದ ಶ್ರೇಷ್ಠತೆ. ಆದರೆ ಜನನಾಮಾನ್ಯರು ಅಧಿಕಾರ ನಡೆಸಿದ್ದಾರೆ. ಇತಿಹಾಸ ಸೃಜಿಸುವ ಅವಕಾಶ ನಮ್ಮ ಕೈಯಲ್ಲಿದೆ. ಅಧಿಕಾರ ನಿಮ್ಮ ಕರಗಳಲ್ಲಿದೆ. ಅಮೆರಿಕದ ಕಲ್ಪನೆಯೂ ನಿಮ್ಮ ಬಳಿಯೇ ಇದೆ’ ಎಂದು ಬೈಡನ್ ಹೇಳಿದ್ದಾರೆ.
ಅಧ್ಯಕ್ಷರಾಗಿ ಆರು ತಿಂಗಳು ಇರಲಿದ್ದು, ಈ ಅವಧಿಯಲ್ಲಿ ನ್ಯಾಟೋ ಪಡೆಗಳನ್ನು ಇನ್ನಷ್ಟು ಬಲಗೊಳಿಸುವ ಹಾಗೂ ಒಗ್ಗೂಡಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ವ್ಲಾಡಿಮರ್ ಪುಟಿನ್ ಅವರ ಪ್ರಯತ್ನ ತಡೆಯಲು, ಗಾಜಾದಲ್ಲಿ ಯುದ್ಧ ವಿರಾಮಕ್ಕೆ ಶ್ರಮಿಸುತ್ತೇನೆ. ಸುಪ್ರೀಂ ಕೋರ್ಟ್‌ನಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಪ್ರಯತ್ನ ಜಾರಿಯಲ್ಲಿರುವುದಾಗಿ ಬೈಡನ್ ಹೇಳಿದ್ದಾರೆ.
ಭಾಷಣದಲ್ಲಿ ಕಮಲಾ ಹ್ಯಾರಿಸ್‌ರನ್ನು ಹೊಗಳಿದ ಬೈಡನ್, ಅವರು ಗಟ್ಟಿಗಿತ್ತಿ ಹಾಗೂ ಸಮರ್ಥ ವ್ಯಕ್ತಿ. ದೇಶವನ್ನು ಮುನ್ನಡೆಸುವಲ್ಲಿ ಅವರು ನನ್ನ ಅದ್ಭುತ ಜೊತೆಗಾರ್ತಿಯಾಗಿದ್ದರು ಎಂದು ಶ್ಲಾಘಿಸಿದರು.
2024ರ ನವೆಂಬರ್‌ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಬಳಿಕ ದೇಶವನ್ನುದ್ದೇಶಿಸಿ ಅವರು ಮಾಡಿದ ಮೊದಲ ಭಾಷಣ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.