ADVERTISEMENT

ಸಿಂಗಪುರದಲ್ಲಿ ಭಾರತೀಯ ಮಹಿಳೆಯ ಎದೆಗೆ ಒದ್ದು ಜನಾಂಗೀಯ ನಿಂದನೆ

ಪಿಟಿಐ
Published 19 ಜನವರಿ 2023, 3:14 IST
Last Updated 19 ಜನವರಿ 2023, 3:14 IST
   

ಸಿಂಗಪುರ: ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಸಿಂಗಪುರದ ವ್ಯಕ್ತಿಯೊಬ್ಬ ಭಾರತ ಮೂಲದ ಮಹಿಳೆ ಜನಾಂಗೀಯ ನಿಂದನೆ ಮಾಡಿ, ಎದೆಗೆ ಒದ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ನಡೆದು ಎರಡು ವರ್ಷ ಕಳೆದರೂ ಆ ಆಘಾತದಿಂದ ತಾನು ಹೊರಬರಲು ಸಾಧ್ಯವಾಗಿಲ್ಲ ಎಂದು 57 ವರ್ಷದ ಮಹಿಳೆ ಹಿಂದುಜಾ ನೀತಾ ವಿಷ್ಣುಭಾಯ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಸಿಂಗಪುರದ ಚುವಾ ಚು ಕಾಂಗ್‌ನ ಹೌಸಿಂಗ್ ಎಸ್ಟೇಟ್‌ನಲ್ಲಿ ಮೇ 7,2021ರಂದು ಈ ಘಟನೆ ನಡೆದಿದೆ.

ADVERTISEMENT

32 ವರ್ಷದ ವಾಂಗ್ ಷಿಂಗ್ ಫಾಂಗ್ ಎಂಬ ವ್ಯಕ್ತಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದು, ನ್ಯಾಯಾಲಯದ ಮೊದಲ ವಿಚಾರಣೆ ವೇಳೆ ಆರೋಪ ತಳ್ಳಿ ಹಾಕಿದ್ದಾನೆ.

ನ್ಯಾಯಾಲಯದ ದಾಖಲೆಗಳ ಪ್ರಕಾರ, ವಾಂಗ್, ಮಹಿಳೆಯ ಭಾವನೆಗಳಿಗೆ ಘಾಸಿ ಮಾಡುವ ಉದ್ದೇಶದಿಂದಲೇ ಹಿಂದುಜಾ ಮೇಲೆ ಜನಾಂಗೀಯ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಹಿಂದುಜಾ ಅವರ ಎದೆಗೆ ಒದೆಯುವ ಮೂಲಕ ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಬುಧವಾರ, ಹಿಂಉಜಾ ಅವರನ್ನು ಪ್ರಾಸಿಕ್ಯೂಷನ್‌ನ ಮೊದಲ ಸಾಕ್ಷಿಯಾಗಿ ವಿಚಾರಣೆಗೆ ಕರೆಯಲಾಯಿತು. ಈ ವೇಳೆ ಅವರು ನ್ಯಾಯಾಲಯದ ಕೋಣೆಗೆ ಕಾಲಿಡುತ್ತಿದ್ದಂತೆ ಅಕ್ಷರಶಃ ಕುಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ವಾಂಗ್‌ನನ್ನು ನೋಡಿ ಅಳಲು ಆರಂಭಿಸಿದ್ದಾರೆ. ಈ ಸಂದರ್ಭ ವಿಚಾರಣೆಯನ್ನು ಕೆಲ ಕಾಲ ಸ್ಥಗಿತಗೊಳಿಸಿದ ಜಿಲ್ಲಾ ನ್ಯಾಯಾಧೀಶ ಶೈಫುದಿನ್ ಸರುವನ್ ಅವರು ಆಕೆಯನ್ನು ಸಂತೈಸಿದರು.

ಘಟನೆ ವಿವರಿಸಿದ ಹಿಂದುಜಾ

ಕೆಲಸಕ್ಕೆ ಹೋಗುವ ಮೊದಲು ಬೇರೆ ಯಾವುದೇ ರೀತಿಯ ವ್ಯಾಯಾಮ ಸಾಧ್ಯವಾಗದಿರುವುದರಿಂದ ವೇಗವಾಗಿ ನಡೆಯುವ ಅಭ್ಯಾಸ ರೂಢಿಸಿಕೊಂಡಿದ್ದೇನೆ. ಆಗ ಕೋವಿಡ್ ಉತ್ತುಂಗವಾಗಿದ್ದರಿಂದ ಮಾಸ್ಕ್ ಕಡ್ಡಾಯವಾಗಿತ್ತು. ಆದರೆ, ನಡಿಗೆ ವೇಳೆ ಹೆಚ್ಚು ಮುಕ್ತವಾಗಿ ಉಸಿರಾಡಲು ಮಾಸ್ಕ್ ಅನ್ನು ಕೆಳಗೆ ಎಳೆದಿದ್ದೆ. ಬಳಿಕ, ಬಸ್ ನಿಲ್ದಾಣದ ಬಳಿ ತೆರಳುವಾಗ ಯಾರೊ ಜೋರಾಗಿ ಕೂಗುವುದನ್ನು ಗಮನಿಸಿದೆ. ತಿರುಗಿ ನೋಡಿದಾಗ, ವಾಂಗ್ ಮತ್ತು ಮತ್ತೊಬ್ಬ ಮಹಿಳೆ ಮಾಸ್ಕ್ ಧರಿಸುವಂತೆ ಸೂಚಿಸಿದರು. ವಾಕಿಂಗ್ ಮಾಡುತ್ತಿರುವುದರಿಂದ ಮಾಸ್ಕ್ ತೆಗೆದಿರುವುದಾಗಿ ಹೇಳಿದೆ. ಈ ಸಂದರ್ಭ ಹತ್ತಿರ ಬಂದ ವಾಂಗ್ ಜನಾಗೀಯ ನಿಂದನೆ ಮಾಡಿದರು. ಜಗಳವಾಡಲು ಇಷ್ಟವಿಲ್ಲದ ನಾನು, ದೇವರು ನಿಮಗೆ ಒಳ್ಳೆಯದು ಮಾಡುತ್ತಾನೆ ಎಂದು ಹೇಳಿದೆ. ಈ ವೇಳೆ, ವಾಂಗ್ ನನ್ನ ಎದೆಗೆ ಒದ್ದರು. ಪರಿಣಾಮ, ಕೆಳಗೆ ಬಿದ್ದು ತೋಳು ಮತ್ತು ಅಂಗೈಯಿಂದ ರಕ್ತಸ್ರಾವವಾಯಿತು ಎಂದು ಹಿಂದುಜಾ ಹೇಳಿದ್ದಾರೆ.

ಈ ಸಂದರ್ಭ ನನ್ನ ಸುರಕ್ಷತೆ ಬಗ್ಗೆ ಆತಂಕವಾಯಿತು. ಕಣ್ಣೀರು ಹಾಕಿದದ್ದೆ. ಎರಡು ವರ್ಷ ಕಳೆದರೂ ಆ ಆಘಾತದಿಂದ ಹೊರಬರಲು ಆಗಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.