ADVERTISEMENT

ಶಾಂತಿಯುತ ಪ್ರತಿಭಟನೆಯನ್ನು ಗೌರವಿಸುವುದು ಅತಿ ಮುಖ್ಯ: ವಿಶ್ವಸಂಸ್ಥೆ

ಪಿಟಿಐ
Published 27 ಜನವರಿ 2021, 7:49 IST
Last Updated 27 ಜನವರಿ 2021, 7:49 IST
ಗಣರಾಜ್ಯೋತ್ಸವದ ದಿನದಂದು ರೈತರ ಪ್ರತಿಭಟನೆಯಲ್ಲಿ ಹಿಂಸಾಚಾರ
ಗಣರಾಜ್ಯೋತ್ಸವದ ದಿನದಂದು ರೈತರ ಪ್ರತಿಭಟನೆಯಲ್ಲಿ ಹಿಂಸಾಚಾರ    

ನವದೆಹಲಿ: ಭಾರತದಲ್ಲಿ ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿರುವ ಪ್ರತಿಭಟನೆಯಲ್ಲಿ ಹಿಂಸಾಚಾರ ಭುಗಿಲೆದ್ದಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್, ಶಾಂತಿಯುತ ಪ್ರತಿಭಟನೆಯನ್ನು ಗೌರವಿಸುವುದು ಅತಿ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ಗಣರಾಜ್ಯೋತ್ಸವದ ದಿನದಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಆದರೆ ಪ್ರತಿಭಟನೆಯಲ್ಲಿ ಭಾರಿ ಹಿಂಸಾಚಾರ ನಡೆದಿತ್ತು.

ನವದೆಹಲಿ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸುತ್ತಾ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್, ಇಂತಹ ಅನೇಕ ಸಂದರ್ಭದಲ್ಲಿ ಹೇಳುವಂತೆಯೇ, ಶಾಂತಿಯುತ ಪ್ರತಿಭಟನೆ, ಅಹಿಂಸೆಯನ್ನು ಗೌರವಿಸುವುದು ಅತಿ ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

ADVERTISEMENT

ಬ್ಯಾರಿಕೇಡ್‌ಗಳನ್ನು ಮುರಿದ ರೈತರು ಪೊಲೀಸರ ವಿರುದ್ಧ ಬೀದಿಜಗಳಕ್ಕಿಳಿದಿದ್ದರು. ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಸಂಸ್ಥೆಯ ಧ್ವಜವನ್ನು ಹಾರಿಸಿದ್ದರು. ರೈತರ ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈ ವರೆಗೆ 22 ಎಫ್‌ಐಆರ್ ದಾಖಲಿಸಿದ್ದಾರೆ. 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಓರ್ವ ಪ್ರತಿಭಟನಾಕಾರ ಮೃತಪಟ್ಟಿದ್ದರು.

41 ರೈತ ಸಂಘಟನೆಗಳನ್ನು ಒಳಗೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾ ನವೆಂಬರ್ 26ರಿಂದಲೇ ದೆಹಲಿ ಗಡಿ ಭಾಗಗಳಲ್ಲಿ ಅಹಿಂಸಾತ್ಮಕ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಸರ್ಕಾರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಪ್ರಯೋಜನವುಂಟಾಗಲಿಲ್ಲ. ಈ ನಡುವೆ ಮಂಗಳವಾರ ನಡೆಸಿದ ಟ್ರ್ಯಾಕ್ಟರ್ ಜಾಥಾ ಹಿಂಸಾಚಾರಕ್ಕೆ ತಿರುಗಿತ್ತು.

ಘಟನೆಯಲ್ಲಿ ತಮ್ಮ ಕೈವಾಡವನ್ನು ನಿರಾಕರಿಸಿರುವ ಕಿಸಾನ್ ಮೋರ್ಚಾ, ಹಿಂಸಾಚಾರದ ಹಿಂದೆ ಪಿತೂರಿ ನಡೆದಿದೆ ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.