ADVERTISEMENT

ಭ್ರಷ್ಟಾಚಾರ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪತ್ನಿಗೆ 17 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 9:47 IST
Last Updated 20 ಡಿಸೆಂಬರ್ 2025, 9:47 IST
ಪಾಕ್ ಪ್ರಧಾನಿ ಇಮ್ರಾನ್ ಖಾನ್ – ರಾಯಿಟರ್ಸ್ ಚಿತ್ರ
ಪಾಕ್ ಪ್ರಧಾನಿ ಇಮ್ರಾನ್ ಖಾನ್ – ರಾಯಿಟರ್ಸ್ ಚಿತ್ರ   

ಇಸ್ಲಾಮಾಬಾದ್: ತೋಷಖಾನಾ –2  ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (73)  ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಇಲ್ಲಿನ ನ್ಯಾಯಾಲಯ ಶನಿವಾರ 17 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.  

ಚಿನ್ನ, ವಜ್ರದ ಆಭರಣಗಳು ಸೇರಿ ಸೌದಿ ಸರ್ಕಾರ 2021ರಲ್ಲಿ ಪಾಕಿಸ್ತಾನಕ್ಕೆ ನೀಡಿದ ದುಬಾರಿ  ಉಡುಗೊರೆಗಳನ್ನು ಮಾರಿ ಭ್ರಷ್ಟಾಚಾರ ಎಸಗಿದ ಆರೋಪವನ್ನು ಇಮ್ರಾನ್‌ ಖಾನ್‌, ಬುಶ್ರಾ ಬೀಬಿ ಎದುರಿಸುತ್ತಿದ್ದಾರೆ. ಇದನ್ನು ತೋಷಖಾನಾ – 2 ಪ್ರಕರಣ ಎನ್ನಲಾಗುತ್ತದೆ.

ತೆಹ್ರೀಕ್‌ ಇ–ಇನ್ಸಾಫ್‌ ಪಕ್ಷದ ಸ್ಥಾಪಕ ಇಮ್ರಾನ್‌ ಖಾನ್‌ 2023ರಿಂದ ರಾವಲ್ಪಿಂಡಿ ಅಡಿಯಾಲ ಜೈಲಿನಲ್ಲಿದ್ದಾರೆ. ಈ ಜೈಲಿನಲ್ಲೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಾರೂಕ್ ಅರ್ಜುಮಂದ್‌ ತೀರ್ಪು ಪ್ರಕಟಿಸಿದರು. 

ADVERTISEMENT

ಪಾಕಿಸ್ತಾನದ ದಂಡ ಸಂಹಿತೆಯ ಸೆಕ್ಷನ್‌ 409ರ ಅಡಿ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ 7 ವರ್ಷ ಸೆರೆವಾಸ ಮತ್ತು ಇಬ್ಬರಿಗೂ ತಲಾ ₹52 ಲಕ್ಷ ದಂಡ ವಿಧಿಸಲಾಗಿದೆ. ಇಮ್ರಾನ್‌ ಖಾನ್‌ ಅವರ ‘ವಯಸ್ಸು’ ಮತ್ತು  ಬುಶ್ರಾ ಬೀಬಿ ‘ಮಹಿಳೆ’ ಎಂಬ ಅಂಶವನ್ನೂ ಪರಿಗಣಿಸಲಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.

ಈ ಪ್ರಕರಣಲ್ಲಿ 21 ಸಾಕ್ಷಿಗಳನ್ನು ಕೋರ್ಟ್‌ ವಿಚಾರಣೆಗೆ ಒಳಪಡಿಸಿತ್ತು. ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿರುವ ಖಾನ್‌, ‘ಇದು ರಾಜಕೀಯ ಪಿತೂರಿ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.