ಇಮ್ರಾನ್ ಖಾನ್
– ರಾಯಿಟರ್ಸ್ ಚಿತ್ರ
ನವದೆಹಲಿ: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೂವರು ಸಹೋದರಿಯರು ತಮ್ಮ ಸಹೋದರನನ್ನು ಭೇಟಿಯಾಗಲುರಾವಲ್ಪಿಂಡಿಯ ಅಡಿಯಾಲ ಜೈಲಿಗೆ ಹೋದಾಗ ಅವರ ಮೇಲೆ ಆಡಳಿತ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಕಳೆದ ಎರಡು ದಿನಗಳಿಂದ ಇಮ್ರಾನ್ ಖಾನ್ ಹತ್ಯೆ ಕುರಿತ ವದಂತಿಗಳು ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಇಮ್ರಾನ್ ಖಾನ್ ಅವರ ಸಹೋದರಿಯರಾದ ನೊರೀನ್ ನಿಯಾಜಿ, ಅಲೀಮಾ ಖಾನ್ ಮತ್ತು ಡಾ. ಉಜ್ಮಾ ಖಾನ್ ಅವರು ಮೂರು ವಾರಗಳಿಂದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಲು ತಮಗೆ ಅವಕಾಶ ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಅಡಿಯಾಲ ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಕೊಲ್ಲಲಾಗಿದೆ ಎಂದು ಮೂಲಗಳನ್ನು ಆಧರಿಸಿ ಅಫ್ಗಾನ್ ಮಾಧ್ಯಮ ವರದಿಯ ನಂತರ ಅವರ ಸಾವಿನ ಬಗ್ಗೆ ವ್ಯಾಪಕ ವದಂತಿಗಳು ಹರಿದಾಡುತ್ತಿವೆ. ಎರಡು ದಿನಗಳಿಂದ ಪಾಕ್‌ನ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ವಿಷಯವಾಗಿದೆ. 72 ವರ್ಷದ ನಾಯಕನನ್ನು ಜೈಲಿನಲ್ಲಿ ತೀರಾ ಕೆಟ್ಟದಾಗಿ ನಡೆಸಿಕೊಳ್ಳಲಾಗಿದ್ದು, ಅವರು ಮೃತಪಟ್ಟಿದ್ದಾರೆ. ಬಳಿಕ, ಮೃತ ದೇಹವನ್ನು ಹೊರಗೆ ಸಾಗಿಸಲಾಗಿದೆ ಎಂದು ಅಫ್ಗಾನಿಸ್ತಾನ್ ಟೈಮ್ಸ್ ವರದಿ ಮಾಡಿದೆ.
ನಂತರ, ಸ್ವಯಂ ಘೋಷಿತ ಬಲೂಚಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಹ ಅಡಿಯಾಲ ಜೈಲಿನಲ್ಲಿ ಖಾನ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ, ಐಎಸ್‌ಐ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಪಿಟಿಐ ಅಧ್ಯಕ್ಷರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದೂ ಎಕ್ಸ್ ಪೋಸ್ಟ್‌ನಲ್ಲಿ ಅದು ಆರೋಪಿಸಿತ್ತು.
‘ಈ ಮಾಹಿತಿಯು ನಿಜವೆಂದು ದೃಢಪಟ್ಟರೆ, ಅದು ಭಯೋತ್ಪಾದಕ ಪಾಕಿಸ್ತಾನದ ಸಂಪೂರ್ಣ ಅಂತ್ಯವನ್ನು ಸೂಚಿಸುತ್ತದೆ. ಸತ್ಯವು ಜಗತ್ತಿಗೆ ಬಹಿರಂಗವಾದ ಕ್ಷಣದಿಂದ ಪಾಕ್‌ನ ಅಂತಿಮ ಕಾನೂನುಬದ್ಧತೆಯ ಕುಸಿತ ಕಾಣುತ್ತದೆ’ಎಂದು ಪೋಸ್ಟ್ ಎಚ್ಚರಿಸಿತ್ತು.
ಆದರೆ, ಪಾಕಿಸ್ತಾನ ಸರ್ಕಾರ ಮಾತ್ರ ಈ ಯಾವುದೇ ವರದಿಗಳನ್ನು ಖಚಿತಪಡಿಸಿಲ್ಲ. ‘ಅಫ್ಗಾನಿಸ್ತಾನ್ ಟೈಮ್ಸ್’ ವರದಿಗಳನ್ನೂ ಪಾಕಿಸ್ತಾನದ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಕಳೆದ ಮೇ ತಿಂಗಳಲ್ಲೂ ಇದೇ ರೀತಿಯ ವಂದತಿ ಹಬ್ಬಿದ್ದವು ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಇಮ್ರಾನ್ ಖಾನ್ ಆಸ್ಪತ್ರೆ ಸೇರಿದ್ದ ಹಳೆಯ ಚಿತ್ರವೂ ಹರಿದಾಡುತ್ತಿದೆ.
ಸದ್ಯ, ಖಾನ್ ಅವರ ಸಹೋದರಿ ಅಲೀಮಾ ಖಾನ್ ಮತ್ತು ಅವರ ಪಿಟಿಐ ಪಕ್ಷದ ಬೆಂಬಲಿಗರು ಅಡಿಯಾಲ ಜೈಲಿನ ಬಳಿಯ ಗೋರಖ್‌ಪುರ ಚೆಕ್‌ಪೋಸ್ಟ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದಾರೆ. ಗುರುವಾರ ಮತ್ತು ಮುಂದಿನ ಮಂಗಳವಾರ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಕುಟುಂಬಕ್ಕೆ ಅವಕಾಶ ನೀಡುವುದಾಗಿ ಜೈಲಿನ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.