ADVERTISEMENT

ನನ್ನನ್ನು ಕೊಂದರೂ ಸರಿಯೇ..: ಅಭಿಮಾನಿಗಳಿಗೆ ಇಮ್ರಾನ್‌ ಖಾನ್ ಸಂದೇಶ

ಬಂಧನ ಭೀತಿಯಲ್ಲಿರುವ ಇಮ್ರಾನ್‌ ಖಾನ್‌ರಿಂದ ತಮ್ಮ ಹಿಂಬಾಲಕರಿಗೆ ವಿಡಿಯೊ ಸಂದೇಶ

ಪಿಟಿಐ
Published 15 ಮಾರ್ಚ್ 2023, 2:14 IST
Last Updated 15 ಮಾರ್ಚ್ 2023, 2:14 IST
   

ಲಾಹೋರ್‌: ನನ್ನನ್ನು ಬಂಧಿಸಿದರೂ ಅಥವಾ ಕೊಂದರೂ ಕೂಡ ಸರಿ, ನೀವು ನಿಮ್ಮ ಹಕ್ಕುಗಳಿಗೆ ಹೋರಾಟ ಮಾಡಿ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ತಮ್ಮ ಬೆಂಬಲಿಗರಿಗೆ ಕರೆಕೊಟ್ಟಿದ್ದಾರೆ.

ತೋಶಾಖಾನ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಇಮ್ರಾನ್‌ ಖಾನ್ ಅವರು ವಿಡಿಯೋ ಮೂಲಕ ತಮ್ಮ ಬಂಬಲಿಗರಿಗೆ ಸಂದೇಶ ರವಾನೆ ಮಾಡಿದ್ದಾರೆ.

ಪ್ರಕರಣ ಸಂಬಂಧ ಇಮ್ರಾನ್‌ ಖಾನ್‌ ವಿರುದ್ಧ ಬಂಧನ ವಾರೆಂಟ್‌ ಇದ್ದು, ಅವರನ್ನು ಬಂಧಿಸಲು ಪೊಲೀಸರು, ಝಮನ್‌ ಪಾರ್ಕ್‌ನಲ್ಲಿರುವ ನಿವಾಸ ತಲುಪಿದ್ದಾರೆ. ನಿವಾಸದ ಸುತ್ತಲೂ ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಪೊಲೀಸರು ಹಾಗೂ ಅಭಿಮಾನಿಗಳ ನಡುವೆ ತಿಕ್ಕಾಟ ನಡೆಯುತ್ತಿದ್ದು, ಪೊಲೀಸರು ಅಶ್ರುವಾಯು, ಜಲಫಿರಂಗಿ ಮೂಲಕ ಜನರನ್ನು ಚದುರಿಸಲು ಪ್ರಯತ್ನ ಪಟ್ಟಿದ್ದಾರೆ.

ADVERTISEMENT

ಈ ವೇಳೆಯಲ್ಲಿ ತಮ್ಮ ಹಿಂಬಾಲರಿಗೆ ವಿಡಿಯೊ ಸಂದೇಶ ರವಾನೆ ಮಾಡಿದ್ದಾರೆ.

ಇಮ್ರಾನ್‌ ವಿಡಿಯೊದಲ್ಲಿ ಏನಿದೆ?

ತಮ್ಮ ಪಕ್ಷ ತೆಹ್ರಿಕ್‌–ಎ–ಇನ್ಸಾಫ್‌ನ ಸಾಮಾಜಿಕ ಜಾಲತಾಣದಲ್ಲಿ 1.12 ನಿಮಿಷದ ವಿಡಿಯೊ ಬಿಡುಗಡೆ ಮಾಡಲಾಗಿದೆ.

‘ನನ್ನ ಬಂಧನದ ಬಳಿದ ದೇಶದ ಜನ ಸುಮ್ಮನಾಗುತ್ತಾರೆ ಎಂದು ಅವರು ಭಾವಿಸಿದ್ದಾರೆ. ನೀವು ಅದನ್ನು ಸುಳ್ಳು ಮಾಡಿದ್ದೀರಿ. ದೇವರು ನನಗೆ ಎಲ್ಲವೂ ಕೊಟ್ಟಿದ್ದಾನೆ. ನಾನು ನಿಮಗಾಗಿ ಹೋರಾಟ ಮಾಡುತ್ತಿದ್ದೇನೆ. ನನ್ನ ಜೀವನಪರ್ಯಂತ ಹೋರಾಟ ಮಾಡುತ್ತಲೇ ಬಂದಿದ್ದೇನೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ‘ ಎಂದು ಹೇಳಿದ್ದಾರೆ.

‘ಒಂದು ವೇಳೆ ನನ್ನನ್ನು ಬಂಧಿಸಿದರೂ ಅಥವಾ ಕೊಲೆ ಮಾಡಿದರೂ, ಇಮ್ರಾನ್‌ ಖಾನ್‌ ಇಲ್ಲದೆಯೂ ನಾವು ಹೋರಾಟ ಮಾಡುತ್ತೇವೆ. ಆದರೆ ಗುಲಾಮಗಿರಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ದೇಶದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವವರಿಗೆ ನೀವು ತಿಳಿಸಬೇಕಾಗಿದೆ‘ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.