ADVERTISEMENT

ಪ್ರಧಾನಿ ಮೋದಿಗೆ ಇಮ್ರಾನ್ ಖಾನ್ ಬರೆದ ಪತ್ರದಲ್ಲೇನಿದೆ?

ಪಿಟಿಐ
Published 31 ಮಾರ್ಚ್ 2021, 6:51 IST
Last Updated 31 ಮಾರ್ಚ್ 2021, 6:51 IST
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ಇಸ್ಲಾಮಾಬಾದ್: ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಉಭಯ ದೇಶಗಳ ನಡುವಣ ಸಮಸ್ಯೆಗಳನ್ನು ವಿಶೇಷವಾಗಿಯೂ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗಳನ್ನು ಬಗೆಹರಿಸಲು ರಚನಾತ್ಮಕ ಮತ್ತು ಫಲಿತಾಂಶ ಆಧಾರಿತ ಸಂವಾದಕ್ಕೆ ಶಕ್ತಗೊಳಿಸುವ ವಾತಾವರಣ ರೂಪಿಸುವುದು ಕಡ್ಡಾಯವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಕಳೆದ ವಾರ 'ಪಾಕಿಸ್ತಾನ ದಿನ'ದಂದು ಇಮ್ರಾನ್‌‌ಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಪತ್ರ ಬರೆದಿದ್ದರು. ಭಾರತವು ಪಾಕಿಸ್ತಾನದ ಜೊತೆಗೆ ಸೌಹಾರ್ದಯುತ ಸಂಬಂಧವನ್ನು ಬಯಸುತ್ತದೆ. ಆದರೆ ಅದಕ್ಕೆ ಭಯೋತ್ಪಾದನೆ ಹಗೆತನಗಳಿಂದ ಮುಕ್ತವಾಗಿರುವ ವಾತಾವರಣ ಇರುವುದು ಅಗತ್ಯ ಎಂದು ಉಲ್ಲೇಖಿಸಿದ್ದರು.

ಪ್ರಧಾನಿ ಮೋದಿಯವರ ಪತ್ರಕ್ಕೆ ಉತ್ತರ ನೀಡಿರುವ ಇಮ್ರಾನ್ ಖಾನ್, ಧನ್ಯವಾದ ಸಲ್ಲಿಸಿದ್ದು, ಭಾರತ ಸೇರಿದಂತೆ ಎಲ್ಲ ನೆರೆಹೊರೆಯ ದೇಶಗಳೊಂದಿಗೆ ಪಾಕಿಸ್ತಾನ ಶಾಂತಿಯುತ ಸಹಕಾರದ ಬಾಂಧವ್ಯವನ್ನು ಬಯಸುತ್ತಿದೆ ಎಂದು ಬರೆದಿದ್ದಾರೆ.

ADVERTISEMENT

ಭಾರತ ಮತ್ತು ಪಾಕಿಸ್ತಾನದ ನಡುವೆ ಬಾಕಿ ಇರುವ ಎಲ್ಲ ಸಮಸ್ಯೆಗಳನ್ನು, ಅದರಲ್ಲೂ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ವಿವಾದವನ್ನು ಬಗಹರಿಸುವಲ್ಲಿ ದಕ್ಷಿಣ ಏಷ್ಯಾದಲ್ಲಿನ ಶಾಂತಿ ಮತ್ತು ಸ್ಥಿರತೆಯು ಅನಿಶ್ಚಿತವಾಗಿದೆ ಎಂಬುದು ನಮಗೆ ಮನವರಿಕೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.

ರಚನಾತ್ಮಕ ಮತ್ತು ಫಲಿತಾಂಶ ಆಧಾರಿತ ಸಂವಾದಕ್ಕೆ ಮುಕ್ತ ವಾತಾವರಣ ಸೃಷ್ಟಿಸುವುದು ಕಡ್ಡಾಯವಾಗಿದೆ ಎಂದು ಇಮ್ರಾನ್ ಖಾನ್ ಬರೆದಿದ್ದಾರೆ.

ಇದೇ ಸಂದರ್ಭದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಿಗಲಿ ಎಂದು ಭಾರತೀಯರಿಗೆ ಶುಭ ಹಾರೈಸಿದ್ದಾರೆ.

ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರದಲ್ಲಿ ಕದನ ವಿರಾಮ ಸಂಬಂಧ 2003ರಲ್ಲಿ ಏರ್ಪಟ್ಟಿದ್ದ ಒಪ್ಪಂದಕ್ಕೆ ಬದ್ಧವಾಗಿರಲು ಉಭಯ ರಾಷ್ಟಗಳು ಒಪ್ಪಿಗೆ ಸೂಚಿಸಿತ್ತು.

ಏತನ್ಮಧ್ಯೆ ಇಮ್ರಾನ್ ಖಾನ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದ ಸಂದರ್ಭದಲ್ಲಿ 'ಶೀಘ್ರ ಗುಣಮುಖರಾಗಲಿ' ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.